ಜಿಲ್ಲೆ

ಎಲ್ಲ ಸಂಪತ್ತಿಗಿಂತ ಶಿಕ್ಷಣ ಸಂಪತ್ತೇ ಶ್ರೇಷ್ಟ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹಣ, ಐಶ್ವರ್ಯ ಹಾಗೂ ಎಲ್ಲ ಸಂಪತ್ತಿಗಿಂತ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯ ಅದುವೇ ಶ್ರೇಷ್ಟ ಸಂಪತ್ತು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಮಹಾಸ್ವಾಮೀಜಿ ಹೇಳಿದರು.

ಹೊಸೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲಾ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಮನುಷ್ಯ ಸುಖ ಹಾಗೂ ನೆಮ್ಮದಿಯಿಂದ ಇರಲು ಶಿಕ್ಷಣವೇ ಮುಖ್ಯ. ಉತ್ತಮ ಶಿಕ್ಷಣ ಪಡೆದರೆ, ಆ ಮನುಷ್ಯ ಇಡೀ ಜೀವನ ಯಾರ ಅವಲಂಬನೆಯೂ ಇಲ್ಲದೆ ಬದುಕಬಹುದು ಎಂದರು. ಹಣ, ಸಂಪತ್ತು ಇರುವವರು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅಂಥವರ ಭವಿಷ್ಯ ಉಜ್ವಲವಾಗಿರಲಿದೆ, ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ಬದುಕ ಬಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ ಎಂದರು.

ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು:

ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶ ಆಳುತ್ತಿದ್ದ ಆಂಗ್ಲರನ್ನು ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ಬಿಟ್ಟುಕೊಡುವಂತೆ ಕೇಳಿಕೊಂಡಾಗ ಭಾರತದಲ್ಲಿ ಜನರು ಅವಿದ್ಯಾವಂತರು ಹೆಚ್ಚು ಇರುವ ಕಾರಣ ದೇಶವು ಯಾವುದೇ ರೀತಿ ಅಭಿವೃದ್ಧಿ ಇರುವುದಿಲ್ಲ ಎಂದಿದ್ದರಂತೆ ಎಂದು ಸ್ಮರಿಸಿದ ಸ್ವಾಮೀಜಿ ಆಗ ಅಂದಿನ ಮಠಾಧೀಶರು ಸೇರಿ ಹಲವಾರು ಸಂಘ ಸಂಸ್ಥೆಗಳವರು ಪ್ರಧಾನವಾಗಿ ಎಲ್ಲರಿಗೂ ಶಿಕ್ಷಣ ನೀಡಬೇಕೆಂದು ಪಣತೊಟ್ಟು ದೇಶದ ಮೂಲೆ ಮೂಲೆಯಲ್ಲೂ ಶಾಲೆ, ಗುರುಕುಲಗಳನ್ನು ತೆರೆದು ಉಚಿತ ಶಿಕ್ಷಣ ನೀಡಿದರು ಎಂದರು. ಅಂದಿನ ಕಾಲದಲ್ಲಿ ಬೆರಣಿಕೆಯಷ್ಟಿದ್ದ ಶಿಕ್ಷಿತರು ಈಗ ನೂರಕ್ಕೂ ನೂರು ಮಂದಿ ಶಿಕ್ಷಣ ಪಡೆದು ವಿಶ್ವದಲ್ಲಿ ಮುನ್ನುಗ್ಗುತ್ತಿರುವ ದೇಶವಾಗಿ ಬೆಳೆದಿದೆ. ಸ್ವಾತಂತ್ರ್ಯ ನಂತರ ಹಲವು ಪ್ರದೇಶಗಳಲ್ಲಿ ಮಠಗಳಿಂದ ಉಚಿತ ಶಿಕ್ಷಣದ ನೀಡಿಕೆ ನಂತರ ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ಉತ್ತಮವಾಗಿದೆ ಎಂದ ಅವರು ಈಗ ಆದಿಚುಂಚನಗಿರಿ ಮಠವು ಒಂದು ಲಕ್ಷದ 70 ಸಾವಿರ ಮಂದಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ತಾಂತ್ರಿಕ ಸೇರಿ ವೈಜ್ಞಾನಿಕ ಶಿಕ್ಷಣಕ್ಕೆ ಮತ್ತಷ್ಟು ಒತ್ತು ನೀಡಲಾಗುವುದು ಎಂದರು.