ಮಧುಗಿರಿ : ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸಬೇಕಾದ ಸರ್ಕಾರಿ ಶಾಲೆಗಳ ಸುಮಾರು 2500 ಕೊಠಡಿಗಳು ಶಿಥಿಲಗೊಂಡು ಇಲಿ, ಹೆಗ್ಗಣ ಮತ್ತು ವಿಷ ಜಂತುಗಳ ತಾಣಗಳಾಗಿವೆ. ಬಹುತೇಕ ಕೊಠಡಿಗಳ ಛಾವಣಿಗಳು ಬಿರುಕು ಬಿಟ್ಟಿದ್ದು, ಬಹಳಷ್ಟು ಬಳಕೆಗೆ ಯೋಗ್ಯವಾಗಿಲ್ಲ. ಪ್ರತೀ ಶೈಕ್ಷಣಿಕ ವರ್ಷದಲ್ಲೂ ಶಿಥಿಲಗೊಂಡ ಕೊಠಡಿಗಳ ವರದಿ ಕೇಳುವ ಸರ್ಕಾರ, ಅನುದಾನ ಕೊರತೆಯ ನೆಪವೊಡ್ಡಿ ವರ್ಷಕ್ಕೆ ಇಂತಿಷ್ಟು ಕೊಠಡಿಗಳನ್ನು ದುರಸ್ತಿಗೊಳಿಸುವಂತೆ ನಟಿಸಿ ಕೈತೊಳೆದುಕೊಳ್ಳುತ್ತಿದೆ.
ಕರೊನಾ ಸಂಕಷ್ಟದಲ್ಲಿ ಒಂದು ಕೊಠಡಿಗೆ 15 ರಿಂದ 20 ಮಕ್ಕಳನ್ನು ಕೂರಿಸಿ ಪಾಠ ಮಾಡಬೇಕು ಎಂದು ಆದೇಶ ಹೊರಡಿಸುವ ಸರ್ಕಾರ ಅದಕ್ಕೆ ಬೇಕಾಗುವ ಹೆಚ್ಚುವರಿ ಕೊಠಡಿಗಳ ಬಗ್ಗೆ ಗಮನಹರಿಸಿಲ್ಲ. ಒಂದೂವರೆ ವರ್ಷದಿಂದ ಶಾಲೆ ಬಾಗಿಲು ತೆರೆದಿರಲಿಲ್ಲ. ಈ ಸಂದರ್ಭದಲ್ಲಿ ಶಿಥಿಲಗೊಂಡ ಸರ್ಕಾರಿ ಶಾಲಾ ಕೊಠಡಿಗಳ ಕಾಯಕಲ್ಪಕ್ಕೆ ಏಕೆ ಮುಂದಾಗಲಿಲ್ಲ ಎನ್ನುತ್ತಾರೆ ಮಕ್ಕಳ ಪಾಲಕರು.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 979 ಶಾಲೆಗಳು: ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 2264 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ 50 ಶಾಲೆಗಳಲ್ಲಿ 67 ಕೊಠಡಿಗಳು, ಗುಬ್ಬಿಯ 227 ಶಾಲೆಗಳಲ್ಲಿ 389, ಕುಣಿಗಲ್ ತಾಲೂಕಿನ 51 ಶಾಲೆಗಳಲ್ಲಿ 67, ತುಮಕೂರಿನ 61 ಸರ್ಕಾರಿ ಶಾಲೆಗಳಲ್ಲಿ 111 ಕೊಠಡಿಗಳು ಮತ್ತು ತುರುವೇಕೆರೆಯ 73 ಶಾಲೆಗಳಲ್ಲಿ 134 ಕೊಠಡಿ ಸೇರಿ ಒಟ್ಟು 566 ಸರ್ಕಾರಿ ಶಾಲೆಗಳಲ್ಲಿ 979 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. 766 ಶಾಲೆಗಳು ಬಳಕೆಗೆ ಯೋಗ್ಯವಲ್ಲ: ಚಿಕ್ಕನಾಯಕನಹಳ್ಳಿ ತಾಲೂಕಿನ 61 ಶಾಲೆಗಳಲ್ಲಿ 94, ಗುಬ್ಬಿಯ 96 ಶಾಲೆಗಳಲ್ಲಿ 153, ತಿಪಟೂರಿನ 66 ಶಾಲೆಗಳಲ್ಲಿ 133, ತುಮಕೂರಿನ 89 ಶಾಲೆಗಳಲ್ಲಿ 195, ತುರುವೇಕೆರೆಯ 89 ಶಾಲೆಗಳಲ್ಲಿ 195 ಶಾಲೆ ಸೇರಿ ಒಟ್ಟು 401 ಶಾಲೆಗಳಲ್ಲಿ 766 ಕೊಠಡಿಗಳು ಬಳಕೆಗೆ ಯೋಗ್ಯವಲ್ಲ.
ಮಧುಗಿರಿಯದ್ದೂ ಅದೇ ಕಥೆ : ಬರಪೀಡಿತ ಪ್ರದೇಶವೆಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕಥೆಯೇನೂ ಭಿನ್ನವಾಗಿಲ್ಲ. ಕೊರಟಗೆರೆ ತಾಲೂಕಿನಲ್ಲಿ ಒಟ್ಟು 1093 ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳಿದ್ದು, ಅದರಲ್ಲಿ 767 ಕೊಠಡಿಗಳು ಸುಸ್ಥಿತಿಯಲ್ಲಿವೆ. 111 ಶಾಲೆಗಳಲ್ಲಿ ಸಣ್ಣಪುಟ್ಟ ದುರಸ್ತಿ ಮತ್ತು 215 ಕೊಠಡಿಗಳು ಶಿಥಿಲವಾಗಿವೆ. ಮಧುಗಿರಿ ತಾಲೂಕಿನಲ್ಲಿ ಒಟ್ಟು 1441 ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳಿದ್ದು, ಇಲ್ಲಿ 1004 ಕೊಠಡಿಗಳು ಸುಸ್ಥಿತಿಯಲ್ಲಿದ್ದು, 167 ಕೊಠಡಿಗಳಲ್ಲಿ ಸಣ್ಣಪುಟ್ಟ ದುರಸ್ತಿ ಮತ್ತು 270 ಕೊಠಡಿಗಳು ಶಿಥಿಲಗೊಂಡಿವೆ. ಪಾವಗಡ ತಾಲೂಕಿನಲ್ಲಿ ಒಟ್ಟು 1153 ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳಿದ್ದು, 702 ಕೊಠಡಿಗಳು ಸುಸ್ಥಿತಿಯಲ್ಲಿವೆ. 209 ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಮತ್ತು 242 ಶಾಲೆಗಳು ಶಿಥಿಲವಾಗಿವೆ. ಶಿರಾ ತಾಲೂಕಿನಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲೇ ಅತೀ ಹೆಚ್ಚು ಶಾಲಾ ಕೊಠಡಿಗಳಿವೆ ಎಂಬ ಹೆಗ್ಗಳಿಕೆಯಿದ್ದು, ಅತೀ ಹೆಚ್ಚು ಕೊಠಡಿಗಳೂ ಶಿಥಿಲಗೊಂಡಿವೆ. ಇಲ್ಲಿ ಒಟ್ಟು 1591 ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳಿವೆ. 903 ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 213 ಶಾಲೆಗಳು ಸಣ್ಣಪುಟ್ಟ ದುರಸ್ತಿ ಮತ್ತು 475 ಕೊಠಡಿಗಳು ಶಿಥಿಲಗೊಂಡಿವೆ.
ಶಿಕ್ಷಣ ಸಚಿವರ ತವರು ಜಿಲ್ಲೆ : ಕರೊನಾ ಸಂಕಷ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ ಎಂದು ಅಂಕಿ-ಅಂಶ ಮುಂದಿಟ್ಟುಕೊಂಡು ಬೀಗುವ ಸರ್ಕಾರ, ಶಿಥಿಲಗೊಂಡ ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗೆ ಮೀನಮೇಷ ಎಣಿಸುತ್ತಿದೆ. ಜಿಲ್ಲೆಯವರೇ ಆದ ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾಗಿದ್ದು, ತವರು ಜಿಲ್ಲೆಯ ಶಿಥಿಲಗೊಂಡ ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಮುಂದಾಗುವರೇ ಕಾದು ನೋಡಬೇಕಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಥಿಲಗೊಂಡ ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಆಯಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಗಳನ್ನು ರಚಿಸಿ ಅವರ ಸಹಕಾರದೊಂದಿಗೆ ಶಿಥಿಲಗೊಂಡ ಸರ್ಕಾರಿ ಶಾಲೆ ಕೊಠಡಿಗಳ ದುರಸ್ತಿ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಇದಕ್ಕೆ ಹಳೇಯ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ. ಕೃಷ್ಣಮೂರ್ತಿ ಡಿಡಿಪಿಐ ಮಧುಗಿರಿ ಶೈಕ್ಷಣಿಕ ಜಿ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಶಿಥಿಲಗೊಂಡ ಶಾಲಾ ಕೊಠಡಿಗಳು ಮತ್ತು ಬದಲಿ ನಿರ್ಮಾಣದ ಶಾಲಾ ಕೊಠಡಿಗಳ ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡಿದ್ದು, ಅನುದಾನ ಬಿಡುಗಡೆಗೊಂಡಲ್ಲಿ ಸರ್ಕಾರಿ ಶಾಲೆ ಕೊಠಡಿಗಳ ದುರಸ್ತಿ ಮತ್ತು ಬದಲಿ ಕೊಠಡಿಗಳ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು. ಸಿ.ನಂಜಯ್ಯ ಡಿಡಿಪಿಐ ತುಮಕೂರು ಶೈಕ್ಷಣಿಕ ಜಿಲ್ಲೆ ್ಲೆ