ಬೆಳಗಾವಿ: ವಿದ್ಯಾರ್ಥಿಗಳಿಗೆ ಕೃಷಿ ಹಾಗೂ ತೋಟಗಾರಿಕೆ ಕುರಿತು ಅರಿವು ಮೂಡಿಸುವುದಕ್ಕಾಗಿ ತೋಟಗಾರಿಕೆ ಇಲಾಖೆ ಶಾಲೆ ಆವರಣದಲ್ಲಿ ‘ಪೌಷ್ಟಿಕ ತೋಟ’ ನಿರ್ಮಿಸುವಂತಹ ವಿಶೇಷ ಯೋಜನೆ ರೂಪಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಸರ್ಕಾರಿ ವಸತಿ ನಿಲಯ, ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪೌಷ್ಟಿಕ ತೋಟ ತಲೆ ಎತ್ತಲಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಬ್ಲಾಕ್, ತಾಲೂಕು, ಜಿಲ್ಲಾಮಟ್ಟದ ಶಿಕ್ಷಣ ಅಧಿಕಾರಿಗಳಿಗೆ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿದೆ. ಪೌಷ್ಟಿಕ ತೋಟ ನಿರ್ಮಿಸುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಪೌಷ್ಟಿಕ ತೋಟದಿಂದ ಶಾಲೆಗಳಲ್ಲಿ ಬಿಸಿಯೂಟಕ್ಕೂ ತರಕಾರಿ, ಮಕ್ಕಳಿಗೆ ಹಣ್ಣುಗಳು ಲಭ್ಯವಾಗಲಿದೆ. ತೋಟ ನಿರ್ಮಾಣಕ್ಕೆ ಗ್ರಾಪಂಗಳು ನರೇಗಾ ಕಾರ್ಮಿಕರನ್ನು ಒದಗಿಸಲಿವೆ.
ಮುಖ್ಯಶಿಕ್ಷಕರಿಗೆ ತೋಟ ನಿರ್ವಹಣೆ ಜವಾಬ್ದಾರಿ: ಶಾಲೆ ಆವರಣದಲ್ಲಿ ತರಕಾರಿ, ಬಾಳೆ, ಪಪ್ಪಾಯಿ, ಮಾವು, ಸಪೋಟ, ನುಗ್ಗೆ ಸೇರಿ ಮತ್ತಿತರ ಬೆಳೆಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ. ಶಾಲೆಯ ಮುಖ್ಯಶಿಕ್ಷಕ, ವಸತಿ ನಿಲಯದ ನಿಲಯ ಪಾಲಕ, ಅಂಗನವಾಡಿ ಕಾರ್ಯಕರ್ತೆಯರು ತೋಟದ ನಿರ್ವಹಣೆ ಜವಾಬ್ದಾರಿ ಹೊರಬೇಕಿದೆ. ಶಾಲೆ ಆವರಣಕ್ಕೆ ತಡೆಗೋಡೆ ಹಾಗೂ ನೀರಿನ ಲಭ್ಯತೆ ಇರುವೆಡೆ ಪೌಷ್ಟಿಕ ತೋಟ ನಿರ್ಮಾಣವಾಗಲಿದೆ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದರಂತೆ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಪೌಷ್ಟಿಕ ತೋಟ ನಿರ್ಮಿಸಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಜಿಪಂ ಸಿಇಒಗಳಿಗೆ ಸೂಚಿಸಿದೆ.| ರವೀಂದ್ರ ಹಕಾಟೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಳಗಾವಿ
| ಜಗದೀಶ ಹೊಂಬಳಿ