ಬನ್ನೂರು: ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕಲಾಪಗಳು ಚುರುಕುಗೊಳಿಸುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳು ಮುಖ್ಯ ಪಾತ್ರ ನಿರ್ವಹಿಸಲಿದ್ದು ಅವುಗಳ ಕಡೆಗೂ ವಿದ್ಯಾರ್ಥಿಗಳ ಗಮನ ಕೊಡಬೇಕು. ಆಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಕೇತುಪುರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.
ಪಟ್ಟಣ ಸಮೀಪದ ಕೇತುಪುರ ಗ್ರಾಮದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವವರು ಸರ್ಕಾರ ನಡೆಸುವ ಜವಾಬ್ದಾರಿ ಹೊಂದಿದ್ದು, 18 ವರ್ಷದ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವ ವಿಶೇಷ ಹಕ್ಕನ್ನು ಸಂವಿಧಾನ ನೀಡಿದೆ. ಅದನ್ನು ಶಾಲೆಯಲ್ಲಿ ಪರಿಚಯಿಸುವ ಸಲುವಾಗಿ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತರಗತಿವಾರು ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮುಖ್ಯ ಚುನಾವಣಾಧಿಕಾರಿಯಿಂದ ನಾಮಪತ್ರ ಪಡೆದು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ 10 ರೂ. ಠೇವಣಿಯಿಟ್ಟು ನಾಮಪತ್ರ ಸಲ್ಲಿಸಿದರು. 14 ಮಂತ್ರಿಗಳ ಸ್ಥಾನಕ್ಕೆ 34 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದರು. ಮತದಾನದ ಪಕ್ರಿಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಅಡುಗೆ ಸಿಬ್ಬಂದಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸೇರಿದಂತೆ 118 ಜನರು ಪಾಲ್ಗೊಂಡಿದ್ದರು.
ಮುಖ್ಯಚುನಾವಣಾಧಿಕಾರಿಯಾಗಿ ಸುಮಾ, ಮತಗಟ್ಟೆಯ ಅಧಿಕಾರಿಯಾಗಿ ಹೇಮಚಂದ್ರ ಕಾರ್ಯನಿರ್ವಹಿಸಿದರು. ಗಿರೀಶ್‌ಕುಮಾರ್, ಜೆ.ರೂಪಾ, ಸತೀಶ್‌ಕುಮಾರ್, ಮಂಜುಳಾ, ನಾಗರಾಜು, ಪ್ರಶಾಂತ್ ಇತರರಿದ್ದರು.