ಮೈಸೂರು: ಬೇಸಿಗೆ ರಜೆಯ ಮುಕ್ತಾಯದ ಬಳಿಕ ಬುಧವಾರ ಜಿಲ್ಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಚಟುವಟಿಕೆ ಪ್ರಾರಂಭಕ್ಕೆ ಶಾಲೆಗಳು ಪುನರಾರಂಭಗೊಂಡಿತು. ಶಾಲೆಗಳನ್ನು ತಳಿರು, ತೋರಣ ಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾ ಯಿತು. ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಪ್ರತಿಯೊಂದು ಶಾಲೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ಕಳೆದ ಬಾರಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಆಗಿರಲಿಲ್ಲ. ಆದರೆ, ಈ ಬಾರಿ ಶಾಲೆ ಪ್ರಾರಂಭದ ಮೊದಲ ದಿನವೇ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿದ್ಯಾರ್ಥಿಗಳ ಕೈ ಸೇರಿವೆ. ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಒಟ್ಟು 15,85,953 ಪಠ್ಯ ಪುಸ್ತಕಗಳು ಹಾಗೂ ಖಾಸಗಿ ಶಾಲೆಗಳಿಗೆ 9,82,203 ಪುಸ್ತಕಗಳನ್ನು ನೀಡಲಾಗಿದೆ. ಮೊದಲ ದಿನವೇ ಎಲ್ಲ ಶಾಲೆಗಳಲ್ಲೂ 1ನೇ ತರಗತಿಗೆ ಮಕ್ಕಳ ದಾಖಲಾತಿಯೂ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ ಒಟ್ಟು 3,446 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇವೆ. ಕೆಲವು ದಿನಗಳ ಹಿಂದೆಯೇ ಖಾಸಗಿ ಶಾಲೆಗಳು ಪ್ರಾರಂಭಗೊಂಡಿತು. ಬುಧವಾರ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಪ್ರಾರಂಭಗೊಂಡಿತು. ವಿದ್ಯಾರ್ಥಿಗಳನ್ನು ಶಿಕ್ಷಕರು, ಎಸ್‌ಡಿಎಂಸಿ, ಶಾಲಾ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಕೆಲವೆಡೆ ಸಂಘ ಸಂಸ್ಥೆಗಳ ಪ್ರಮುಖರು ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡರು. ಜಿಲ್ಲೆಯ ಶಾಸಕರು ಸಹ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.
ಸಾಕಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾ ಯಿತು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಂದರ್ಭ ಸಿಹಿ ಹಂಚಿಕೆ ಮಾಡಲಾಯಿತು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಗಳು ಜಿಲ್ಲೆಯ ಎಲ್ಲ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಹಾಗೂ ಶಾಲೆಯ ಕುಂದುಕೊರತೆಗಳನ್ನು ಅಲಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ರ್ದೇಶಕ ರಾಮಚಂದ್ರರಾಜೇ ಅರಸ್ ನಗರದ ಕುಂಬಾರಕೊಪ್ಪಲು, ಎನ್.ಅರ್. ಮೊಹಲ್ಲಾದ ನಿಜಾಮಿಯಾ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಸಡಗರ ಸಂಭ್ರಮದಲ್ಲಿ ಭಾಗಿಯಾದರು. ಅಲ್ಲದೆ, ಜಿಲ್ಲೆಯ ವಿವಿಧೆಡೆ ಶಾಲಾ ಪ್ರಾರಂಭೋತ್ಸವದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮಾಹಿತಿ ಪಡೆದರು.