ಶನಿವಾರಸಂತೆ: ಸಮಿಪದ ಆಲೂರು ಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 75 ವರ್ಷದ ಅಂಗವಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ, ಶಿಕ್ಷಣ ಪ್ರೇಮಿಗಳ ಸಹಕಾರದಿಂದ ವಜ್ರ ಮಹೋತ್ಸವ ಸಂಭ್ರಮ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಗಳವಾರ ಶಾಲಾ ಸಭಾಂಗಣದಲ್ಲಿ ವಜ್ರಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ.ಎಸ್.ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಉಪ ಸಮಿತಿ ಪದಾಧಿಕಾರಿಗಳ ಮತ್ತು ಸದಸ್ಯರ ಸಭೆಯಲ್ಲಿ ವಜ್ರ ಮಹೋತ್ಸವವನ್ನು ಅದ್ದೂರಿಯಾಗಿ ಮತ್ತು ಮಾದರಿಯಾಗಿ ನಡೆಸಲು ಗಣ್ಯರು, ವಿವಿಧ ರಂಗದ ಪ್ರಮುಖರು ಸಲಹೆ ನೀಡಿದರು. ವಜ್ರಮಹೋತ್ಸವ ಕಾರ್ಯಕ್ರಮ ಮೂರು ದಿನಗಳ ವರೆಗೆ ನಡೆಯಲಿದೆ. ಆರ್ಥಿಕ ಸಂಪನ್ಮೂಲ ಸಂಗ್ರಹ, ಅಗತ್ಯ ಇರುವುದರಿಂದ ಇದೇ ಶಾಲೆಯಲ್ಲಿ ಓದಿದ, ಈಗ ವಿವಿಧ ಹುದ್ದೆ, ಸ್ಥಾನಗಳಲ್ಲಿ ಇರುವ ಹಳೆಯ ವಿದ್ಯಾರ್ಥಿಗಳು, ಮಾಜಿ ಮತ್ತು ಹಾಲಿ ಸೈನಿಕರನ್ನು ಗುರುತಿಸಿ, ಸಂಪರ್ಕಿಸಲು ತೀರ್ಮಾನಿಸಲಾಯಿತು.
ವಜ್ರಮಹೋತ್ಸವನ್ನು ಪಕ್ಷಾತೀತ, ರಾಜಕೀಯ ರಹಿತ, ಸಮುದಾಯ, ಜಾತಿ ರಹಿತವಾಗಿ ಮಾಡಬೇಕು. ಎಲ್ಲರನ್ನೂ ಒಂದೆಡೆ ಸೇರಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಸಮಾರಂಭ ಯಶಸ್ವಿಯಾಗಲು ಕಾರ್ಯ ನಿರ್ವಹಿಸುವಂತೆ
ನಿರ್ಧಾರ ಮಾಡಲಾಯಿತು. ಮುಂದಿನ ಪೂರ್ವ ಸಿದ್ಧತಾ ಸಭೆ ಜು. 1 ರಂದು ನಡೆಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಹೇಮಾನಂದ್, ಹಳೆಯ ವಿದ್ಯಾರ್ಥಿಗಳಾದ ಹಿರಿಯ ನಾಗರಿಕ ಕಡ್ಯದ ಮಾಚಯ್ಯ, ನಿವೃತ್ತ ಪ್ರಾಂಶುಪಾಲ ಮಾದಪ್ಪ, ವೀಣಾ ಬೈಮನ, ಶಾಲಾ ಮುಖ್ಯ ಶಿಕ್ಷಕ ಉದಯ್‌ಕುಮಾರ್, ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಎಚ್.ಪಿ.ಕರುಂಬಯ್ಯ ಹಾಜರಿದ್ದರು.