ಗಂಗಾವತಿ: ಶಾಲೆಗೆ ಸೇರಿದ ಭೂಮಿ ಕೃಷಿ ಚಟುವಟಿಕೆಗೆ ನೀಡಲಾಗಿದೆಂದು ಆರೋಪಿಸಿ ತಾಲೂಕಿನ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳು ಮಂಗಳವಾರ ಶಾಲಾವರಣದಲ್ಲಿ ಪ್ರತಿಭಟನೆ ನಡೆಸಿದರು.
ಹೊಸಳ್ಳಿಯ ಸರ್ಕಾರಿ ಹಿಪ್ರಾ ಶಾಲೆಗೆ 1960ರಲ್ಲಿ ಕಲ್ಲುಮಠದ ಚನ್ನಬಸವ ಸ್ವಾಮೀಜಿ ದೇಣಿಗೆ ರೂಪದಲ್ಲಿ 5ಎಕರೆ ನೀಡಿದ್ದು, ಶಾಲೆ ಹೆಸರಿನಲ್ಲಿ ಪಹಣಿಯಿದೆ. ಮೈದಾನಕ್ಕಾಗಿ ಭೂಮಿ ಬಳಕೆ ಮಾಡುವ ಬದಲಿಗೆ ಭತ್ತ ಬೆಳೆಯಲು ಅವಕಾಶ ನೀಡಿರುವ ಹಿಂದಿನ ಶಾಲಾಡಳಿತ ಮಂಡಳಿ ಕ್ರಮ ಖಂಡಿಸಿ ಹಳೇ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷ ಹನುಮೇಶ ಮಾತನಾಡಿ, ಶಾಲೆಗೆ ನೀಡಿರುವ ಭೂಮಿ ಸದ್ಬಳಕೆಯಾಗುತ್ತಿಲ್ಲ. ಮುಖ್ಯಶಿಕ್ಷರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಇತ್ತೀಚೆಗೆ ಶಾಲೆಗೆ ನಿರ್ಮಿಸಿರುವ ಕಾಂಪೌಂಡ್ ಕಳಪೆಯಾಗಿದೆ. ಶಾಲೆಯಲ್ಲಿದ್ದ ಕಲ್ಲು ಮತ್ತು ತೆಂಗಿನ ಮರದ ಕಾಯಿಗಳನ್ನು ಮಾರಾಟ ಮಾಡುತ್ತಿದ್ದರೂ ಲೆಕ್ಕಪತ್ರ ಬಹಿರಂಗ ಪಡಿಸುತ್ತಿಲ್ಲ. ಶಿಕ್ಷಣಾಧಿಕಾರಿಗಳು ಮಧ್ಯಪ್ರವೇಶಿಸಿ ಭೂಮಿ ಉಳಿಸಿಕೊಡಬೇಕು. ನರೇಗಾ ಯೋಜನೆಯಡಿ ಸುಸಜ್ಜಿತ ಕ್ರೀಡಾ ಮೈದಾನ ನಿರ್ಮಿಸಬೇಕೆಂದು ಒತ್ತಾಯಿಸಿದರು. ಎಸ್ಡಿಎಂಸಿ ಸದಸ್ಯರಾದ ದುರುಗಪ್ಪ, ವೆಂಕಟೇಶ, ಅಂಜನೇಯ, ಹಳೇ ವಿದ್ಯಾರ್ಥಿಗಳಾದ ಶಿವರಾಜ ಹೊಸಳ್ಳಿ, ಸಿದ್ದಪ್ಪ, ಮಹೇಶ ಮೋಟಿ, ರುದ್ರೇಶ ಹೊಸಳ್ಳಿ, ಕನಕರಾಯ, ಮಲ್ಲಪ್ಪ, ರಗಡಪ್ಪ, ಆನಂದ ಲಕ್ಕಿ, ಶಂಭುಲಿಂಗಪ್ಪ ಇತರರಿದ್ದರು.
ಶಾಲೆಗೆ ನೀಡಿರುವ ಭೂಮಿಯಲ್ಲಿ ಭತ್ತ ಬಿತ್ತನೆ ಮಾಡುತ್ತಿರುವ ಬಗ್ಗೆ ಮಾಹಿತಿಯಿದ್ದು, ಶಿಕ್ಷಣ ಸಂಯೋಜಕರನ್ನು ಶಾಲೆಗೆ ಕಳುಹಿಸಿ ವರದಿ ನೀಡುವಂತೆ ಸೂಚಿಸಲಾಗುವುದು.| ಸೋಮಶೇಖರಗೌಡ ತಿಪ್ಪನಾಳ ಬಿಇಒ, ಗಂಗಾವತಿ