ಮನೋಹರ ಬೆಳಂಜ ಬೆಳ್ತಂಗಡಿ
ಸಾವಿರಾರು ಜನರಿಗೆ ಅಕ್ಷರ ಜ್ಞಾನ ಕಲಿಸಿ ವಿದ್ಯಾವಂತರನ್ನಾಗಿಸಿ ಮಾದರಿಯಾಗಿದ್ದ ನೆರಿಯ ಗ್ರಾಮದ ದೇವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಟು ವಷರ್ಗಳ ಹಿಂದೆ ಮುಚ್ಚಲ್ಪಟ್ಟಿದ್ದು, ಪ್ರಸ್ತುತ ಕುಸಿಯುವ ಹಂತದಲ್ಲಿದೆ.
30 ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಶಾಲೆ ನೆರಿಯ ಗ್ರಾಮದ ದೇವಗಿರಿ, ಅಂಬಟೆಮಲೆ, ಗಂಡಿಬಾಗಿಲು ಮೊದಲಾದ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿತ್ತು. ಊರವರೊಬ್ಬರು ಸುಮಾರು ಒಂದು ಎಕರೆ ಜಾಗ ಶಾಲೆಗೆಂದು ಕೊಡುಗೆ ನೀಡಿದ್ದರು. ಒಂದು ವರ್ಷಕ್ಕೆ ಸರಾಸರಿ 1ರಿಂದ 7ನೇ ತರಗತಿವರೆಗೆ 200ಕ್ಕಿಂತ ಅಧಿಕ ಮಕ್ಕಳು ಕಲಿಯುತ್ತಿದ್ದರು. ಮುಂದೆ ಮಕ್ಕಳ ದಾಖಲಾತಿ ಕಡಿಮೆಯಾಗಿ 2012ರಲ್ಲಿ ಶಾಲೆಯೇ ಮುಚ್ಚಿತು. ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಶಾಲೆಯನ್ನು ಮತ್ತೆ ತೆರೆಯುವ ಬಗ್ಗೆ ಪ್ರಯತ್ನಪಡಲಿಲ್ಲ.
ಸಂಪೂರ್ಣ ಶಿಥಿಲ: ಶಾಲೆ ಮುಚ್ಚಿದ ಬಳಿಕ ನಿರ್ವಹಣೆ ಇಲ್ಲದೆ ಛಾವಣಿಯ ಅರ್ಧ ಭಾಗ ಕುಸಿದಿದೆ. ಹೆಂಚು, ಪಕ್ಕಾಸುಗಳು ಸಂಪೂರ್ಣ ಶಿಥಿಲಗೊಂಡು ಜಾರುತ್ತಿವೆ. ಸುತ್ತ ಗಿಡಗಂಟಿ ಬೆಳೆದಿದೆ. ಕೊಠಡಿಗಳು, ಶೌಚಗೃಹ ಕಸ ತುಂಬಿ ತ್ಯಾಜ್ಯದ ಕೇಂದ್ರಗಳಾಗಿವೆ. ನೆರಿಯ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಹಲವು ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಿರುವುದು ಈ ಶಾಲೆಯ ದಾಖಲಾತಿ ಕ್ಷೀಣಿಸಲು ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಮುಚ್ಚಿರುವ ನಮ್ಮೂರ ಶಾಲೆಯನ್ನು ದುರಸ್ತಿಗೊಳಿಸಿ, ಅಭಿವೃದ್ಧಿಪಡಿಸಿದರೆ ಮಕ್ಕಳ ದಾಖಲಾತಿಗೆ ಕೊರತೆಯಾಗದು. ಹರಿಪ್ರಸಾದ್, ನೆರಿಯ ನಿವಾಸಿ ಈ ಶಾಲೆಯಲ್ಲಿ ದಾಖಲಾತಿ ಇಲ್ಲದ ಕಾರಣ ಯಾವುದೇ ಅನುದಾನ ಸಿಗುತ್ತಿಲ್ಲ. ಇದರಿಂದ ಶಾಲೆಗೆ ಕಾಯಕಲ್ಪ ನೀಡಲು ಅಡಚಣೆ ಉಂಟಾಗಿದೆ. ತಾರಾಕೇಸರಿ ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ