ಉಳ್ಳಾಲ: ಕೌಟುಂಬಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟೆಕಾರ್‌ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕಿಯ ಮೃತದೇಹ ಶನಿವಾರ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚೆರ್ಕಳ ಎಡನೀರು ನಿವಾಸಿ ಕೃಷ್ಣ ನಾಯ್ಕ್ ಎಂಬವರ ಪುತ್ರಿ ಮೇಘಶ್ರೀ(13) ಮೃತ ದುರ್ದೈವಿ. ಈಕೆ ಎಡನೀರು ಮಠದ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ. ತಿಂಗಳ ಹಿಂದೆ ಕೋಟೆಕಾರ್‌ನಲ್ಲಿರುವ ಮಾವನ ಮನೆಯಲ್ಲಿ ಕಾರ್ಯಕ್ರಮಕ್ಕಾಗಿ ಹೆತ್ತವರ ಜತೆ ಬಂದಿದ್ದ ಬಾಲಕಿ ಬಳಿಕ ಮನೆಗೆ ಹೋಗದೆ ಅಲ್ಲೇ ಉಳಿದಿದ್ದಳು.
ಹಾಡು ಹಾಕಿ ನೃತ್ಯ ಮಾಡುವ ಹವ್ಯಾಸ ಹೊಂದಿದ್ದ ಬಾಲಕಿಯ ಮೃತದೇಹ ಶನಿವಾರ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೃತ್ಯ ಮಾಡುತ್ತಿದ್ದಾಗ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಸಾವಿನಲ್ಲಿ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆಮಂದಿ ಹಾಗೂ ಹೆತ್ತವರನ್ನು ಉಳ್ಳಾಲ ಠಾಣಾ ಪೊಲೀಸರು ವಿಚಾರಣೆಗೆ ತೆಗೆದುಕೊಂಡಿದ್ದಾರೆ.
ತನ್ನ ಮನೆಯಲ್ಲಿ ಎಲ್ಲರೂ ಬೆಳ್ಳಗಿದ್ದು ತಾನು ಮಾತ್ರ ಕಪ್ಪಾಗಿದ್ದೇನೆ ಎನ್ನುವ ಕೀಳರಿಮೆ ಬಾಲಕಿಯಲ್ಲಿತ್ತು ಎನ್ನಲಾಗಿದೆ. ಇದರಿಂದ ಜಿಗುಪ್ಸೆ ಹೊಂದಿದ್ದ ಬಾಲಕಿ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.