ಯಲಬುರ್ಗಾದ ಬೇಕರಿಯೊಂದರಲ್ಲಿ ಸಿದ್ಧಪಡಿಸಲಾದ ಕೇಕ್‌ಗಳು.  
ಜಿಲ್ಲೆ

ಜೂ.1ರ ಬರ್ತ್‌ಡೇ ಕೇಕ್‌ಗೆ ಹೆಚ್ಚಿದ ಬೇಡಿಕೆ: ಬೇಕರಿಗಳಲ್ಲಿ ಬುಕ್ ಮಾಡುತ್ತಿರುವ ಗ್ರಾಹಕರು

ಯಲಬುರ್ಗಾ: ಶಾಲಾ ದಾಖಲಾತಿ ಪ್ರಕಾರ ಜೂ.1 ರಂದು ಜನ್ಮದಿನ ಆಚರಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ಹೀಗಾಗಿ ಪಟ್ಟಣದ ಬೇಕರಿಗಳಲ್ಲಿ ಕೇಕ್ ಖರೀದಿಗೆ ಬೇಡಿಕೆ ಹೆಚ್ಚಿದೆ.

ಪಟ್ಟಣ ಸೇರಿ ತಾಲೂಕಿನ ಯುವಕರು ಹಾಗೂ ಹಿರಿಯರ ಜನ್ಮದಿನ ನಿಮಿತ್ತ ಆಪ್ತರು, ಬಂಧು ಮಿತ್ರರು ಮತ್ತು ಕುಟುಂಬ ವರ್ಗದವರು ಪಟ್ಟಣದ ಬೇಕರಿಗಳಲ್ಲಿ ಕೇಕ್ ಖರೀದಿಸಲು ಮುಂಗಡವಾಗಿ ಬುಕ್ ಮಾಡಿದ್ದಾರೆ. ವಿಭಿನ್ನ ಶೈಲಿಯ ಆಕರ್ಷಕವಾದ ಕೇಕ್‌ಗಳನ್ನು ಸಿದ್ಧಪಡಿಸುವಲ್ಲಿ ಅಂಗಡಿ ಮಾಲೀಕರು ನಿರತರಾಗಿರುವುದು ಕಂಡು ಬಂತು. ಪಟ್ಟಣದಲ್ಲಿ ಏಳೆಂಟು ಬೇಕರಿಗಳ ಪೈಕಿ ಪ್ರತಿ ಅಂಗಡಿಯಲ್ಲಿ 40 ರಿಂದ 50 ಕೆ.ಜಿ. ಕೇಕ್ ಮಾರಾಟವಾಗುವ ನಿರೀಕ್ಷೆ ಇದೆ. ಹೆಚ್ಚಿನ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆ ಇದ್ದು, ಮಾಲೀಕರು ಉತ್ತಮ ಲಾಭ ಗಳಿಕೆಯಲ್ಲಿದ್ದಾರೆ.

ಎಣ್ಣೆ ಮತ್ತು ಕೆಲ ಖಾದ್ಯ ಪದಾರ್ಥಗಳ ಬೆಲೆ ಅಧಿಕವಾಗಿದ್ದರೂ ಕಳೆದ ಬಾರಿಗಿಂತ ಈ ಬಾರಿ ಒಂದು ಕೆ.ಜಿ.ಕೇಕ್ ಬೆಲೆ ಏರಿಕೆಯಾಗಿದೆ. ಕಡಿಮೆ ದರದ ಕೇಕ್‌ಗೆ 250 ರಿಂದ 300 ರೂ., ಐಸ್ ಕೇಕ್‌ಗೆ 400 ರಿಂದ 450 ರೂ., ಚಾಕೋಲೆಟ್ ಕೇಕ್‌ಗೆ 350 ರಿಂದ 400 ರೂ., ಭಾವಚಿತ್ರವುಳ್ಳ ಕೇಕ್‌ಗೆ 600 ರಿಂದ 800 ರೂ. ದರವಿದೆ.

ಈ ಬಾರಿ ಜೂ.1ರಂದು ಜನ್ಮದಿನ ಆಚರಿಸಿಕೊಳ್ಳುವವರು ವಿಧ ವಿಧದ ಕೇಕ್‌ಗಳನ್ನು ತಯಾರಿಸಿಕೊಡುವಂತೆ ಈಗಾಗಲೇ ಬುಕ್ ಮಾಡಿದ್ದಾರೆ. ನಾರ್ಮಲ್ ಕೇಕ್‌ಗೆ 250 ನಿಗದಿಪಡಿಸಿದ್ದು, ವಿಭಿನ್ನ ಶೈಲಿಯಲ್ಲಿರುವ ಕೇಕ್‌ಗಳಿಗೆ ಬೇರೆ ಬೇರೆ ದರಗಳು ಒಳಗೊಂಡಿವೆ.| ಮಾರುತಿ ಮುಧೋಳ, ಬೇಕರಿ ಅಂಗಡಿ ಮಾಲೀಕ ಯಲಬುರ್ಗಾ