ಜಿಲ್ಲೆ

ವಂದಾಲ ವಿದ್ಯಾಗಮ ಕೇಂದ್ರಕ್ಕೆ ಬಿಇಒ ಭೇಟಿ

ಗೊಳಸಂಗಿ: ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮವಾಗಿದ್ದು, ಸರ್ಕಾರದ ಆದೇಶದಂತೆ ಕಲಿಕಾ ಹಂತದಲ್ಲಿ ನಿರಂತರ ಬದಲಾವಣೆಗಳು ಆಗುತ್ತಿರುತ್ತವೆ. ಆದರೆ, ಕಲಿಕೆ ಮಾತ್ರ ನಿರಂತರ ನಡೆಯುತ್ತಿದೆ ಎಂದು ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.

ವಂದಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆ ವತಿಯಿಂದ ಗ್ರಾಮದ ನಾಲ್ಕು ಕಡೆ ನಡೆಯುತ್ತಿರುವ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಇಂಟರ್‌ನೆಟ್, ಮೊಬೈಲ್ ಸಂಪರ್ಕ ಇಲ್ಲದ ಬಹುತೇಕ ಹಳ್ಳಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿರುವ ಕಡೆ ತೆರಳಿ ಅವರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಅಲ್ಲಿಯೇ ಬೋಧನೆ ಮಾಡುತ್ತಿದ್ದಾರೆ. ವಂದಾಲದಲ್ಲಿ ನಲಿಕಲಿ ಕೃತಿ ಸಂಪುಟ, ಆಂಗ್ಲ ಭಾಷೆಯಲ್ಲಿ ಕೈಗೊಂಡ ವಿನೂತನ ಕಾರ್ಯ ಶ್ಲಾಘನೀಯ. ವಿದ್ಯಾಗಮ ಯೋಜನೆಯಿಂದ ಹಳ್ಳಿ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ ಜತೆಗೆ ಗುಣಮಟ್ಟದ ಕಲಿಕೆ ಆಗುತ್ತಿದೆ ಎಂದರು.

ನಲಿಕಲಿ ಶಿಕ್ಷಕಿಯರಾದ ಎಲ್.ಡಿ.ಭಾವಿಕಟ್ಟಿ, ಎಲ್.ಕೆ. ಕಡೂರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಶಿಧರ ಕಡಿಜಾಡರ, ಸಂಜಯ ಮಾದರ, ರಕ್ಷಿತಾ ವಡ್ಡರ ಮತ್ತಿತರರು ತಯಾರಿಸಿದ ಕೃತಿ ಸಂಪುಟವನ್ನು ವೀಕ್ಷಿಸಿ ಬಿಇಒ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಭಾಕರ ಹೆಬ್ಬಾಳ, ಮುಖ್ಯಶಿಕ್ಷಕ ಎಸ್.ಬಿ. ಭಜಂತ್ರಿ, ಎಸ್.ಬಿ. ತಿಮ್ಮಾಪುರ, ಸದಾ ಪತ್ತಾರ, ಲಲಿತಾ ಇಜೇರಿ, ವಿಜಯಾ ವಾಲಿ, ಲಕ್ಷ್ಮಿ ಹೆಬ್ಬಾಳ ಮತ್ತಿತರರು ಇದ್ದರು.