ಸಾಂದರ್ಭಿಕ ಚಿತ್ರ 
ಜಿಲ್ಲೆ

ಕಠಿಣ ಮಾರ್ಗಸೂಚಿ ಕ್ರಮಗಳೊಂದಿಗೆ ಶಾಲಾ-ಕಾಲೇಜು ಆರಂಭಕ್ಕೆ ಸಿದ್ಧತೆ

ಚಿಕ್ಕಬಳ್ಳಾಪುರ : ಕರೊನಾ ಕಾರಣದಿಂದಾಗಿ ಬಾಗಿಲು ಮುಚ್ಚಿದ್ದ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಾರ್ಯಾರಂಭಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ತರಗತಿಗಳ ನಿರ್ವಹಣೆಗೆ ಸಜ್ಜಾಗುತ್ತಿವೆ.

ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಆ.23 ರಿಂದ ಶಾಲೆ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದು, ಮಕ್ಕಳ ಹಿತದೃಷ್ಟಿಯಿಂದ ಕಠಿಣ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಭೌತಿಕ ತರಗತಿಗಳ ಆರಂಭವನ್ನೇ ಎದುರು ನೋಡುತ್ತಿದ್ದ ಶಿಕ್ಷಣ ಸಂಸ್ಥೆಗಳು ಶಿಕ್ಷಕರು ಮತ್ತು ಮಕ್ಕಳಿಗೆ ತರಗತಿ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇ.0.28 ರಷ್ಟಿರುವುದರಿಂದ ನಿಯಮಾನುಸಾರ ನಿಗದಿತ ತರಗತಿಗಳನ್ನು ನಡೆಸಲು ಅನುಮತಿ ಸಿಕ್ಕಿದೆ. ಈಗಾಗಲೇ ಪದವಿ ಕಾಲೇಜು ತರಗತಿಗಳು ಎಂದಿನಂತೆ ನಡೆಯುತ್ತಿದ್ದು, ಇದರ ಜತೆಗೆ 9, 10, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಜರಾಗಲು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕರೊನಾ ಲಸಿಕೆ ಕಡ್ಡಾಯವಾಗಿ ಪಡೆದುಕೊಂಡಿರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಿದ್ದು, ಹಲವರು ಲಸಿಕೆ ಪಡೆಯಲು ಮುಂದಾಗಿದ್ದಾರೆ.

ಪರೀಕ್ಷಾ ಸಿದ್ಧತೆ ಹಿತದೃಷ್ಟಿ: ಶೈಕ್ಷಣಿಕ ಭವಿಷ್ಯದ ಪ್ರಮುಖ ತಿರುವು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ನಡೆಯದೆ ಆನ್‌ಲೈನ್‌ನಲ್ಲಿ ಶಿಕ್ಷಣ ನೀಡಿ, ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದಂತೆ ಹಾಗೂ ಪರೀಕ್ಷಾ ಸಿದ್ಧತೆ ದೃಷ್ಟಿಯಿಂದ ತರಗತಿಗಳ ಹಾಜರಾತಿ ಅನಿವಾರ್ಯವಾಗಿದೆ ಎಂಬ ಮಾತು ಶಿಕ್ಷಕರು ಮತ್ತು ಪಾಲಕರ ವಲಯದಿಂದ ಕೇಳಿ ಬಂದಿದೆ.

ಕದ್ದುಮುಚ್ಚಿ ತರಗತಿ: ಕೆಲ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಕದ್ದುಮುಚ್ಚಿ ತರಗತಿಗಳನ್ನು ನಡೆಸುತ್ತಿವೆ. ಬೆರಳೆಣಿಕೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಮಾರ್ಗದರ್ಶನದ ನೆಪದಲ್ಲಿ ಕಲಿಕೆ ನೀಡುತ್ತಿರುವ ಆರೋಪಗಳು ಕೇಳಿಬಂದಿದ್ದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಇದರಿಂದ ವಂಚಿತರಾದಂತಾಗಿದೆ. ಅಧಿಕೃತವಾಗಿ ಭೌತಿಕ ತರಗತಿಗಳು ಪ್ರಾರಂಭವಾಗುವುದರಿಂದ ಶೈಕ್ಷಣಿಕ ವ್ಯವಸ್ಥೆ ಮತ್ತೆ ಹಳೇ ಹಳಿಗೆ ಬರುವ ಎಂಬ ನಿರೀಕ್ಷೆ ಮೂಡಿದೆ.

ಭೌತಿಕ ತರಗತಿಗೆ ಗ್ರೀನ್ ಸಿಗ್ನಲ್: ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಸೇರಿ ಕೆಲ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣದ ಶೇ.2 ಕ್ಕಿಂತಲೂ ಹೆಚ್ಚಿರುವುದರಿಂದ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಕರೊನಾ ಪರೀಕ್ಷೆ, ಕ್ವಾರಂಟೈನ್, ಚಿಕಿತ್ಸೆ ಮತ್ತು ಲಸಿಕಾ ಅಭಿಯಾನ ಸೇರಿ ಚುರುಕಿನ ಕ್ರಮಗಳಿಂದ ಜಿಲ್ಲೆಯಲ್ಲಿ ಸೋಂಕು ಪತ್ತೆ ಪ್ರಮಾಣ ಕುಸಿದಿದ್ದು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ ಕೇವಲ 53 ಸಕ್ರಿಯ ಪ್ರಕರಣಗಳಿವೆ. ನಿತ್ಯ ಸರಾಸರಿ 7 ರಿಂದ 10 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಸಾವಿನ ಪ್ರಮಾಣ ಶೇ.0.97 ರಷ್ಟಿದೆ. ಕಡಿಮೆ ಪಾಸಿಟಿವ್ ದರ ಹೊಂದಿರುವ ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರ ಸಹ ಒಂದಾಗಿರುವುದರಿಂದ ಪ್ರೌಢಶಾಲೆಗಳನ್ನು ನಿರ್ಬಂಧಗಳೊಂದಿಗೆ ತೆರೆಯಲು ಅನುಮತಿ ಸಿಕ್ಕಿದೆ.

ಶಾಲಾ ತರಗತಿಗಳ ಮಾರ್ಗಸೂಚಿ: 1.15 ರಿಂದ 20 ಮಂದಿಯನ್ನೊಳಗೊಂಡ ತಂಡ ರಚನೆ 2. ಒಂದೊಂದು ತಂಡಕ್ಕೆ ನಿಗದಿತ ಅವಧಿಯಲ್ಲಿ ಬೋಧನೆ 3. ಪ್ರತಿದಿನ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ 4. ತರಗತಿಗೆ ಬರಲು ವಿದ್ಯಾರ್ಥಿಗಳ ಪಾಲಕರ ಅನುಮತಿ ಕಡ್ಡಾಯ 5.ಭೌತಿಕ ತರಗತಿಗೆ ಹಾಜರಾತಿ ಕಡ್ಡಾಯವಲ್ಲ. 6.ಸೋಂಕಿನ ಲಕ್ಷಣಗಳ್ಳುಳ್ಳವರಿಗೆ ಪ್ರವೇಶವಿಲ್ಲ. 7.ಮಾಸ್ಕ್ ಧರಿಸುವಿಕೆ, ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ 8.ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ.

ಸರ್ಕಾರದಿಂದ ಪ್ರಸ್ತುತ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಇಲಾಖೆ ಸೂಚನೆಯಂತೆ ನಿಯಮಾನುಸಾರ ತರಗತಿಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಯರಾಮರೆಡ್ಡಿ, ಡಿಡಿಪಿಐ, ಚಿಕ್ಕಬಳ್ಳಾಪುರ ಶೈಕ್ಷಣಿಕ ಮತ್ತು ಪರೀಕ್ಷಾ ಹಿತದೃಷ್ಟಿಯಿಂದ 9, 10, ಪ್ರಥಮ ಪಿಯು, ದ್ವಿತೀಯ ಪಿಯು ಭೌತಿಕ ತರಗತಿಗಳ ನಿರ್ವಹಣೆಗೆ ಅನುಮತಿ ಸಿಕ್ಕಿರುವುದು ಸ್ವಾಗತಾರ್ಹ. ರಾಮಕೃಷ್ಣಪ್ಪ, ಶಿಕ್ಷಕ, ಚಿಕ್ಕಬಳ್ಳಾಪುರ ಕರೊನಾ ಪ್ರಕರಣಗಳು ಇಳಿಕೆಯಾಗಿರುವುದರಿಂದ ತರಗತಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇದರಿಂದ ಮಕ್ಕಳಲ್ಲಿ ಸೋಂಕು ಕಂಡು ಬಂದರೆ ಯಾರು ಹೊಣೆ ಹೊರುತ್ತಾರೆ?. ಇನ್ನು ಮಕ್ಕಳಿಗೆ ಕರೊನಾ ಲಸಿಕೆ ಹಾಕಿಸಿಲ್ಲ. ನಿರಂತರವಾಗಿ ಮಾಸ್ಕ್ ಧರಿಸಿ ಪಾಠ ಕೇಳುವುದು ಕಷ್ಟಕರ. ಮಾರ್ಗಸೂಚಿ ನಿಯಮಗಳನ್ನು ಪಾಲಿಸುವುದು ಅನುಮಾನ. ಶ್ರೀನಿವಾಸ್, ಪಾಲಕ, ಚಿಂತಾಮಣಿ