ಬೆಂಗಳೂರು: ಅಗತ್ಯ ಸೇವೆಗಳ ಸರ್ಕಾರಿ ಕಚೇರಿಗಳನ್ನು ಶೇ. 50 ಸಿಬ್ಬಂದಿ ಯೊಂದಿಗೆ ನಡೆಸುವುದು, ಗಡಿಯಲ್ಲಿ ಸರಕು ಸಾಗಣೆಗೆ ಅವಕಾಶ, ಎಸಿ ಬಸ್, ಮೆಟ್ರೋ ರೈಲು ಹಾಗೂ ಎಸಿ ಅಂಗಡಿಗಳನ್ನು ತೆರೆಯದೇ ಲಾಕ್ಡೌನ್ ಹಂತ ಹಂತವಾಗಿ ಹೇಗೆ ಸಡಿಲ ಮಾಡಬಹುದು ಎಂಬ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಮಿತಿ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಿದೆ.
ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಾಕ್ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ವರದಿ ಸಲ್ಲಿಸಿತು. ಈ ಸಮಿತಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಅವರಿದ್ದಾರೆ. ಹಂತ ಹಂತವಾಗಿ ಲಾಕ್ಡೌನ್ ಸಡಿಲಗೊಳಿಸುವುದು ಹೇಗೆ ಎಂಬ ಬಗ್ಗೆ ಈ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿದೆ. ಇದಕ್ಕಾಗಿ ಸಮಿತಿಯವರಿಗೆ ಸಿಎಂ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ 6 ತಿಂಗಳವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.
ಹಾಟ್ಸ್ಪಾಟ್ಗಳಲ್ಲಿ ಲಾಕ್ಡೌನ್ ಮುಂದುವರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದರು.
ಶಿಫಾರಸಿನ ಕೆಲವು ಮುಖ್ಯಾಂಶಗಳು
- ಲಾಕ್ಡೌನ್ ನಂತರ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್ಡೌನ್ ಮಾಡಬೇಕು.
- ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು.
- ಶಾಲೆ ಕಾಲೇಜುಗಳನ್ನು ಮೇ 31ರ ವರೆಗೆ ಮುಚ್ಚಬೇಕು. ಆನ್ಲೈನ್ ತರಗತಿಗಳಿಗೆ ಪ್ರೋತ್ಸಾಹ ನೀಡಬೇಕು.
- ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು.
- ಐಟಿ, ಬಿಟಿ ಉದ್ಯಮಗಳು, ಅತ್ಯವಶ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ.50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು.
- ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು.
- ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನಸಂದಣಿ ಆಗದಂತೆ ಎಚ್ಚರ ವಹಿಸಬೇಕು. =ಅಂತಾರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು.
- ಕೋವಿಡ್ ಪ್ರಕರಣಗಳು ವರದಿಯಾದಾಗ ಚಿಕಿತ್ಸೆಗೆ ವೈದ್ಯರು, ದಾದಿಯರು ಮತ್ತು ಇತರ ಅರೆ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷಾ ಕಿಟ್ಗಳನ್ನು ನೀಡಬೇಕು.
- ಏಪ್ರಿಲ್ 12ರ ನಂತರ ರ್ಯಾಪಿಡ್ ಕಿಟ್ಗಳ ಪೂರೈಕೆಯಾಗಲಿದ್ದು, ಕ್ವಾರಂಟೈನ್ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಮತ್ತಷ್ಟು ಪರಿಣಾಮಕಾರಿ ಆಗಲಿವೆ.
- ನಾನ್ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಸಾಧ್ಯವಾದಷ್ಟು ಟೆಲಿ ಕನ್ಸಲ್ಟೇಷನ್ ನಡೆಸಬೇಕು. =ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು.
- ಏಪ್ರಿಲ್ 30ರ ವರೆಗೆ ಎಸಿ ಬಸ್, ಮೆಟ್ರೋ ಸೇವೆ ಬೇಡ. =ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರ ಅನುಸರಿಸಬೇಕು.
- ಸಮಿತಿ ಮುಂದಿನ 15 ದಿನಗಳ ಅವಧಿಗೆ ಈ ಶಿಫಾರಸುಗಳನ್ನು ಮಾಡಿದೆ.