ಜಿಲ್ಲೆ

37 ಶಾಲಾ-ಕಾಲೇಜುಗಳಿಗೆ ಖನ್ನ ಹಾಕಿದ್ದ ಕಳ್ಳರ ಬಂಧನ

ಗೋಪಾಲಕೃಷ್ಣ ಪಾದೂರ್


ಉಡುಪಿ: ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿದ್ದ ಇಬ್ಬರು ಅಂತರ್‌ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಹೆಜಮಾಡಿ ಗ್ರಾಮದ ಎಸ್.ಎಸ್ ರೋಡ್ ನಿವಾಸಿ ಜಾಹೀದ್ ಸಿನಾನ್ (32), ತಮಿಳುನಾಡು ಸೇಲಂ ಜಿಲ್ಲೆಯ ಕಲ್ಲುಕುಡಚೀ ನಿವಾಸಿ ಕುಮಾರಸ್ವಾಮಿ (59) ಬಂಧಿತರು.

ಇವರಿಬ್ಬರೂ ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 37 ಕಡೆ ರಾತ್ರಿ ಸಮಯ ಶಾಲಾ-ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ಸರಹದ್ದಿನಲ್ಲಿ ಒಟ್ಟು 27 ಕಡೆ ಶಾಲಾ ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.

ಸರಣಿ ಕಳ್ಳತನ ನಡೆಸಿದ್ದ ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಶಾಲಾ ಕಾಲೇಜುಗಳ ಮಾಹಿತಿ , ಸಿಸಿ ಕ್ಯಾಮರಾಗಳ ಪರಿಶೀಲನೆ, ಲಾಡ್ಜ್ ಪರಿಶೀಲನೆ, ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ, ತಾಂತ್ರಿಕ ಮಾಹಿತಿ ಕಲೆಹಾಕಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆ ಯಿಂದ ಬರುವ ವ್ಯಕ್ತಿಗಳು ಹಾಗೂ ವಾಹನಗಳ ಬಗ್ಗೆ ಪೊಲೀಸರು ನಿಗಾವಹಿಸಿದ್ದರು. ಸೋಮವಾರ ಕೋಟ ಠಾಣಾ ಸರಹದ್ದಿನ ಆವರ್ಸೆ ಗ್ರಾಮದ ಬಳಿ ಬೈಕ್‌ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

ಕುಮಾರಸ್ವಾಮಿ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ ಪ್ರಕರಣ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು, 2014 ರಿಂದ 2021 ರವರೆಗೆ ಸುಮಾರು 7 ವರ್ಷ ಕಾರವಾರ ಜೈಲ್ನಲ್ಲಿದ್ದು ಶಿಕ್ಷೆ ಅನುಭವಿಸಿದ್ದ. ಜಾಹೀದ್ ಸಿನಾನ್ ಕಳ್ಳತನ ನಡೆಸಲು ಸಂತೆಕಟ್ಟೆ ಉಡುಪಿ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದು, ಇನ್ನೊಬ್ಬ ಆರೋಪಿ ಕುಮಾರ ಸ್ವಾಮಿಯನ್ನು ತಮಿಳುನಾಡಿನಿಂದ ಕರೆಯಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಆರೋಪಿಗಳಿಂದ 1 ಬೈಕು 2 ಮೊಬೈಲ್ ಪೋನ್ ಹಾಗೂ 10,000 ರೂ. ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ.