ಹುಬ್ಬಳ್ಳಿ: 9 ತಿಂಗಳ ನಂತರ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ವಿದ್ಯಾರ್ಥಿಗಳ ಕಲರವ, ಕರಿ ಹಲಗೆ ಮೇಲೆ ಬಿಳಿ ಅಕ್ಷರಗಳು...
ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಶಾಲಾ ಕಾಲೇಜ್ ಆರಂಭವಾದಾಗ ಕಂಡುಬಂದ ದೃಶ್ಯವಿದು. ಶಾಲೆ-ಕಾಲೇಜ್ ಆರಂಭ ಪ್ರಕ್ರಿಯೆಗೆ ಮೊದಲ ದಿನವಾದ ಶುಕ್ರವಾರ ಧಾರವಾಡ ಜಿಲ್ಲೆಯಲ್ಲಿ ಭಾರಿ ಸ್ಪಂದನವೇನೂ ವ್ಯಕ್ತವಾಗಲಿಲ್ಲ. ಆದರೆ, ಬಂದಷ್ಟೇ ವಿದ್ಯಾರ್ಥಿಗಳು-ಶಿಕ್ಷಕರು, ಸಿಬ್ಬಂದಿ ಕ್ಯಾಂಪಸ್ನಲ್ಲಿ ಸಂಭ್ರಮದ ವಾತಾವರಣ ಮೂಡಿಸಿದರು. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಎಲ್ಲ ಕಾಲೇಜ್ಗಳಲ್ಲಿ ಪರಸ್ಪರ ಅಂತರ ನಿರ್ವಹಣೆ, ಸ್ಯಾನಿಟೈಸರ್ ಇತ್ಯಾದಿ ವ್ಯವಸ್ಥೆ ಮಾಡಲಾಗಿತ್ತು.
ಸುದೀರ್ಘ ಅವಧಿಯ ನಂತರ ಕಾಲೇಜ್ಗಳು ಆರಂಭವಾಗುತ್ತಿರುವುದರಿಂದ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕೆಲವು ಕಡೆ ಶಿಕ್ಷಕರೇ ಆವರಣ ಬಾಗಿಲ ಬಳಿ ನಿಂತು ಆರತಿ ಬೆಳಗಿ, ಹೂವು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಕುಶಲ ವಿಚಾರಿಸಿ, ‘ತರಗತಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ನಿಗದಿತ ಅಂತರದಲ್ಲಿ ಕುಳಿತುಕೊಳ್ಳಿ. ಭಯ ಬೇಡ, ಎಚ್ಚರಿಕೆ ವಹಿಸಿ’ ಎಂದು ಹಿತವಚನ ಹೇಳಿ ತರಗತಿಗೆ ಕಳುಹಿಸಿದರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಅಂತರ ನಿರ್ವಹಣೆ ಸೇರಿ ಸುರಕ್ಷತಾ ಕ್ರಮಗಳ ಪಾಲನೆ ಸುಲಭವಾಯಿತು.
ಮಾರ್ಗಸೂಚಿ ಪಾಲಿಸಿ: ಹುಬ್ಬಳ್ಳಿ ನಗರದ ವಾರ್ಡ್ ನಂ. 47ರ ವ್ಯಾಪ್ತಿಯ ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯಲ್ಲಿ ಶುಕ್ರವಾರ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ವಿದ್ಯಾಗಮ ಯೋಜನೆ ಹಾಗೂ ಶಾಲೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ಕೋವಿಡ್ ಮಹಾಮಾರಿಯಿಂದ ಹಲವು ತಿಂಗಳಿಂದ ಶಾಲೆಗಳು ಮುಚ್ಚಲ್ಪಟಿದ್ದವು. ಈಗ ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆ ಅಡಿ ಪುನರಾರಂಭಗೊಂಡಿವೆ. ವಿದ್ಯಾರ್ಥಿಗಳು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಶಾಲೆಯ ಆಡಳಿತ ಮಂಡಳಿಗಳು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು ಎಂದು ಸಚಿವರು ತಿಳಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಮಹೇಂದ್ರ ಕೌತಾಳ, ಸಂತೋಷ ಅರಕೇರಿ, ಗೋಪಾಲ ಬದ್ದಿ, ರಾಜು ವಂದಾಲ, ಯಮನಪ್ಪ ಕುದರಿ, ಯಮನವ್ವ ವಂದಾಲ, ರೇಖಾ ಬೆಣಸೂಡೆ, ಹನುಮಂತಪ್ಪ ಚಲವಾದಿ, ಇಬ್ರಾಹಿಂ ಹೊಸಪೇಟ, ದೇವಿಕಾ ಚಲವಾದಿ, ಗುರು ಗುರಗುಂಟಿ ಮೊದಲಾದವರು ಉಪಸ್ಥಿತರಿದ್ದರು.
ಸರಸ್ವತಿಗೆ ಪೂಜೆ: ಹುಬ್ಬಳ್ಳಿ ಕೆಎಲ್ಇ ಸಂಸ್ಥೆಯ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೋವಿಡ್-19 ಮುಂಜಾಗ್ರತೆ ನಿಯಮ ಗಳನ್ನು ಪಾಲಿಸಿಕೊಂಡು ತರಗತಿ ಆರಂಭಿಸಲಾಯಿತು. ವಿದ್ಯಾರ್ಥಿಗಳ ಆಗಮನದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ವಿುಸಲಾಗಿತ್ತು. ಪ್ರಾಚಾರ್ಯ ಡಾ. ಎಸ್.ಬಿ ಲಕ್ಕನಗೌಡರ ಕಾಲೇಜ್ ಕ್ಯಾಂಪಸ್ನಲ್ಲಿ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿ, ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ವಿದ್ಯಾರ್ಥಿಗಳು ಸರಸ್ವತಿ ದೇವಿಯ ಭಾವಚಿತ್ರಕ್ಕೆ, ಗುರು ವೃಂದಕ್ಕೆ ನಮಿಸಿ ತರಗತಿಗಳಿಗೆ ಅಡಿ ಇಟ್ಟರು.
ಶೇ. 38 ಹಾಜರಾತಿ : ಜಿಲ್ಲೆಯಲ್ಲಿ ವಿದ್ಯಾಗಮ, 10ನೇ ತರಗತಿಗೆ ಶೇ. 38.18 ವಿದ್ಯಾರ್ಥಿಗಳು ಹಾಜರಾಗಿದ್ದರು. ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ. 46.97, ಅನುದಾನಿತ ಶಾಲೆಗಳಲ್ಲಿ 36.19, ಸ್ಥಳೀಯ ಸಂಘ ಸಂಸ್ಥೆಗಳು ನಡೆಸುವ ಶಾಲೆಗಳಲ್ಲಿ ಶೇ. 25.28 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ. 32.09 ಸೇರಿದಂತೆ ಶಾಲೆಗಳಿಗೆ ದಾಖಲಾಗಿರುವ ಮಕ್ಕಳ ಪೈಕಿ ಶೇ. 38.18ರಷ್ಟು ಹಾಜರಾತಿ ಆಗಿದೆ ಎಂದು ಡಿಡಿಪಿಐ ಎಂ.ಎಲ್. ಹಂಚಾಟೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 25 ಸರ್ಕಾರಿ, 36 ಅನುದಾನಿತ, 67 ಅನುದಾನ ರಹಿತ ಸೇರಿ 128 ಕಾಲೇಜ್ಗಳಿವೆ. ಮೊದಲ ದಿನ 4283 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ. 28.31ರಷ್ಟು ಹಾಜರಾತಿಯಾಗಿದೆ. | ಚಿದಂಬರ ಕೆ. ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಸುಮಾರು 9 ತಿಂಗಳು ಶಾಲೆಗೆ ಹೋಗದೆ ಮನೆಯಲ್ಲಿದ್ದೆವು. ಈಗ ಎಸ್ಸೆಸ್ಸೆಲ್ಸಿ ತರಗತಿಗಳು ಆರಂಭ ವಾಗಿರುವುದಕ್ಕೆ ಖುಷಿಯಾಗಿದೆ. | ಅನಿತಾ ವೀರಾಪುರ ವಿದ್ಯಾರ್ಥಿನಿ
ಕರೊನಾದಿಂದ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಳಂಬವಾಗಿತ್ತು. ಈ ಬಾರಿ 7 ತಿಂಗಳ ವಿಳಂಬವಾಗಿ ಕ್ಲಾಸ್ ಶುರುವಾಗಿವೆ. ಸುದೀರ್ಘ ರಜೆಯ ನಂತರ ಶಾಲೆಗೆ ಬಂದಿರುವುದಕ್ಕೆ ಸಂತೋಷವಾಗುತ್ತಿದೆ. |ಅಂಜಲಿ ಭಜಂತ್ರಿ ವಿದ್ಯಾರ್ಥಿನಿ
ನಿಗದಿಯಂತೆ ವಿದ್ಯಾರ್ಥಿಗಳಿಗೆ ಪಾಠ
ಹುಬ್ಬಳ್ಳಿ: ಶಿಕ್ಷಕರು, ಉಪನ್ಯಾಸಕರು ಒಂದು ದಿನ ಮೊದಲೇ ಶಾಲೆಗೆ ಆಗಮಿಸಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಶೇ. 40ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದರು.
ನವನಗರದ ಸರ್ಕಾರಿ ಕಾಲೇಜಿನ ಅಂದಾಜು 80 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಮಾತ್ರ ಬಂದಿದ್ದರು. ಅವರಿಗೆ ನಿಗದಿಯಂತೆ ಪಾಠ ಮಾಡಲಾಗುತ್ತಿದೆ ಎಂದು ಉಪನ್ಯಾಸಕ ಸಂಜೀವಕುಮಾರ ತಿಳಿಸಿದರು.
ನವನಗರದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 8, 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭಿಸಲಾಯಿತು. ಶಿಕ್ಷಣ ಸಂಯೋಜಕ ರಾಯನಗೌಡ ಪಾಟೀಲ, ಡಿವೈಪಿಸಿ ಪ್ರಮೋದ ಮಹಾಲೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕಿ ಸುವರ್ಣ ಗುಡಗೂರ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ಅನಸೂಯಾ ಇನಾಮತಿ, ವೀಣಾ ಮಲ್ಲಳ್ಳಿ, ಶಾರದಾ ಕಲಿಕಾರ, ಜೆ.ಎಸ್. ಗರಸಂಗಿ, ಇತರರು ಇದ್ದರು.