ಜಿಲ್ಲೆ

ಶಾಲೆ-ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಡೆಯಿರಿ

ಅಶೋಕ್ ಕುಮಾರ್ ಎನ್

ದೇವದುರ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಡೆಯಬೇಕು. ಅನಧಿಕೃತ ಶಾಲೆಗಳ ಮಾನ್ಯತೆ ರದ್ದುಮಾಡುವಂತೆ ಒತ್ತಾಯಿಸಿ ಬಿಇಒ ಸುಖದೇವ್‌ಗೆ ಎಸ್‌ಎಫ್‌ಐನಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಖಾಸಗಿ ಶಾಲೆಗಳಲ್ಲಿ ಶೂ, ಬಟ್ಟೆ, ಪುಸ್ತಕ ಹಾಗೂ ಶುಲ್ಕದ ಹೆಸರಿನಲ್ಲಿ ಹಣ ಪಡೆಯಲಾಗುತ್ತಿದೆ. ತಾಲೂಕಿನಲ್ಲಿ ನಾಯಿಕೊಡೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತಿವೆ. ಒಂದೆಡೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಮತ್ತೊಂದೆಡೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಸರಲ್ಲಿ ಮನಬಂದಂತೆ ಡೊನೇಷನ್‌ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.

ತಾಲೂಕಿನಲ್ಲಿ ಅನಧಿಕೃತವಾಗಿ ಟ್ಯೂಷನ್, ಬೇಸಿಗೆ ತರಬೇತಿ ಶಿಬಿರ, ಸಿಇಟಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ತರಬೇತಿ ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹಗಲು ದರೋಡೆ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಶಾಲೆ-ಕಾಲೇಜುಗಳಲ್ಲಿ ಕೂಡಲೇ ಡೊನೇಷನ್ ಹಾವಳಿ ತಡೆಯಬೇಕು. ಸರ್ಕಾರಿ ನಿಯಮಗಳ ಪ್ರಕಾರ ಶುಲ್ಕದ ಬೋರ್ಡ್ ಅಳವಡಿಸಬೇಕು. 1983ರ ಶಿಕ್ಷಣ ಹಕ್ಕು ಕಾಯ್ದೆ, ಆರ್‌ಟಿಇ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಬೇಕು. ನಿರ್ಲಕ್ಷ್ಯ ಮಾಡಿದರೆ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.