ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಸನಿಹದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣಗೋಡೆ ಕುಸಿದು ಬಿದ್ದಿದೆ. 
ಜಿಲ್ಲೆ

ಮಳೆಗೆ ಶಾಲಾ ಆವರಣಗೋಡೆ ಕುಸಿತ

ಸೌಮ್ಯ ಆರ್

ಕಾಸರಗೋಡು: ಜಿಲ್ಲಾದ್ಯಂತ ಮಳೆ ಬಿರುಸು ಪಡೆದುಕೊಂಡಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಸೋಮವಾರದಿಂದ ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿದೆ.

ಭಾರಿ ಮಳೆಗೆ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತಲಿನ ಆವರಣ ಗೋಡೆ ಹಾಗೂ ಕಟ್ಟಡದ ಹಿಂದಿನ ಮಣ್ಣಿನ ಗುಡ್ಡ ಕುಸಿದಿದೆ. ಎಸ್‌ಎಸ್‌ಕೆ ಸಹಾಯದೊಂದಿಗೆ ಕಟ್ಟಡ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಎಸ್‌ಎಸ್‌ಕೆ ನೆರವಿನಿಂದ ಶಾಲಾ ರಕ್ಷಕಶಿಕ್ಷಕ ಸಂಘದ ನೇತೃತ್ವದಲ್ಲಿ ದುರಸ್ತಿ ಹಾಗೂ ನವೀಕರಣಗೊಳಿಸಲಾದ ಕಟ್ಟಡದ ಮುಂಭಾಗದ ಸುತ್ತಲಿನ ಗೋಡೆ ಕುಸಿದು ಬಿದ್ದಿದೆ.

ಮುಖ್ಯ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ 1.14 ಕೋಟಿ ರೂ.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಜೂ.12ರಂದು ತರಗತಿ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಆವರಣಗೋಡೆ ಕುಸಿದಿದೆ. ಸುಮಾರು 800 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲಾ ವಠಾರದಲ್ಲಿನ ಮಣ್ಣಿನ ದಿಬ್ಬವೊಂದು ಕುಸಿದು ಬೀಳುತ್ತಿದ್ದು, ಇದರಿಂದಲೂ ಅಪಾಯ ಎದುರಾಗುವ ಸಾಧ್ಯತೆಯಿದೆ.

ಮಣ್ಣಿನ ಕುಸಿತ ತಡೆಗಟ್ಟುವುದರ ಜತೆಗೆ ಆವರಣಗೋಡೆ ದುರಸ್ತಿ ನಡೆಸಲು ನಗರಸಭೆ ಮುಂದಾಗಬೇಕು ಎಂದು ಶಾಲಾ ರಕ್ಷಕ-ಶಿಕ್ಷಕ ಸಂಘ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.