ಜಿಲ್ಲೆ

ಹೃದಯಾಘಾತ; ಶಾಲಾ ವಾಹನದ ಚಾಲಕ ಸಾವು...

ಬೃಹತ್​ ಅವಡದಿಂದ ವಿದ್ಯಾರ್ಥಿಗಳು ಪಾರು

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಗತಿ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಆಗಸ್ಟ್​ 1ರಂದು ಬೆಳಗ್ಗೆ ಸಂಭವಿಸಿದೆ.

ಕಾರ್ಕಳ ತಾಲೂಕಿನ ನೀರೆ ಬೈಲೂರು ಗ್ರಾಮದ ಮೊಯ್ದಿನ್​ ಬಾವ (65) ಮೃತಪಟ್ಟ ಚಾಲಕ.

ದಿನಂಪ್ರತಿ ಕಾರ್ಕಳ ಭಾಗದ ವಿದ್ಯಾರ್ಥಿಗಳನ್ನು ಕೇಂದ್ರೀಯ ವಿದ್ಯಾಲಯಕ್ಕೆ ಮಕ್ಕಳನ್ನು ಕರೆತರುತ್ತಿದ್ದರು. ಬೆಳಗ್ಗೆ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಸಾಗಿಸುತ್ತಿರುವಾಗ ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಮಣಿಪಾಲದ ಮಾರುತಿ ವೀಥಿಕಾದಲ್ಲಿ ನಡೆದು ಹೋಗುತ್ತುದ್ದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರನ್ನು ಕಂಡು, ಚಾಲಕ ತನ್ನ ವಾಹನವನ್ನು ನಿಲ್ಲಿಸಿದ್ದಾನೆ. ಅವರನ್ನು ಕರೆದು, ತನಗೆ ತೀವ್ರ ಎದೆನೋವು ಬರುತ್ತಿದೆ ಎಂಬ ವಿಚಾರ ಹೇಳಿಕೊಂಡಿದ್ದಾರೆ.

ತಕ್ಷಣವೇ ಒಳಕಾಡು ಅವರು ಆಂಬುಲೆನ್ಸ್​ ತಂದು ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು, ಮಾರ್ಗಮಧ್ಯೆಯೇ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದರು.

ಸುಮಾರು 20 ಮಕ್ಕಳು ವಾಹನದಲ್ಲಿದ್ದು, ಚಾಲನೆಯಲ್ಲಿರುವಾಗಲೇ ಚಾಲಕ ಮೃತಪಟ್ಟಿದ್ದರೆ ದೊಡ್ಡ ಅವಡವೇ ಸಂಭವಿಸುತ್ತಿತ್ತು. ಚಾಲಕ ನನ್ನನ್ನು ನೋಡಿ ವಾಹನ ನಿಲ್ಲಿಸಿ ಎದೆನೋವಿನ ವಿಚಾರ ಹೇಳಿಕೊಂಡಿದ್ದರಿಂದ ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ, ಎದೆನೋವಿನಿಂದ ಬಳಲುತ್ತಿದ್ದ ಚಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಆಗಲಿಲ್ಲ. | ನಿತ್ಯಾನಂದ ಒಳಕಾಡು. ಸಮಾಜ ಸೇವಕ