ಹೊನ್ನಾಳಿ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳು, ಶಾಲಾ ಕಟ್ಟಡಗಳು ಹಾಗೂ ಕೆರೆಗಳಿಗೆ ಸಾಕಷ್ಟು ಹಾನಿಯಾಗಿದೆ ಎಂದು ತಹಸೀಲ್ದಾರ್ ಜೆ.ಎಚ್.ರಶ್ಮಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನಿಕಟ್ಟೆ, ಮಾದೇನಹಳ್ಳಿ, ಕತ್ತಿಗೆ ಗ್ರಾಮದ 6 ಕಿ.ಮೀ. ರಸ್ತೆ ಹಾಳಾಗಿದೆ. ಇದರ ವೆಚ್ಚ 70 ಲಕ್ಷ ರೂ., ತಾಲೂಕಿನ ದೊಡ್ಡೇರಹಳ್ಳಿ ಹಾಗೂ ಎಚ್.ಗೋಗೊಂಡನಹಳ್ಳಿ ಗ್ರಾಮದ ಶಾಲೆಯ ಕಾಂಪೌಂಡ್ ಹಾನಿಯಾಗಿದೆ ಎಂದರು.
15 ಸಾವಿರ ಎಕರೆ ಮೆಕ್ಕೆಜೋಳ, ಹತ್ತಿ, ಶೇಂಗಾ ತಲಾ 50 ಎಕರೆ, ತೋಟಗಾರಿಕೆ ತರಕಾರಿ 848 ಹೆಕ್ಟೇರ್, ಅಡಿಕೆ 400 ಹೆಕ್ಟೇರ್ ಸೇರಿ ವಿವಿಧ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಪ್ರತಿಮಾ, ತಾಲೂಕು ತೋಟಗಾರಿಕೆ ಸಹಾಯಕ ಅಧಿಕಾರಿ ವೀರಭದ್ರಯ್ಯ ತಿಳಿಸಿದರು.
ಬೆಳೆ ಹಾನಿಗೆ ಸಂಬಂಧಪಟ್ಟಂತೆ ಸರ್ವೆ ಕಾರ್ಯ ನಡೆಯುತ್ತಿದೆ. ಸಂಪೂರ್ಣವಾಗಿ ಮಳೆಯಿಂದ ಎಷ್ಟು ಹಾನಿಯಾಗಿದೆ ಎಂಬುದು ವರದಿ ಬಂದ ಬಳಿಕ ತಿಳಿಯಲಿದೆ. ಪರಿಹಾರ ಎಷ್ಟು ಬೇಕು ಎಂಬುದನ್ನು ಬಳಿಕ ಅಂದಾಜಿಸಲಾಗುವುದು ಎಂದರು.