ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಿಡನಾಳದ ಆರ್.ಕೆ. ಪಾಟೀಲ ಪ್ರೌಢಶಾಲೆ ಮತ್ತು ನೇಕಾರನಗರದ ಛಬ್ಬಿಪ್ಲಾಟ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ವಿುಸಲಾದ ಒಟ್ಟು ನಾಲ್ಕು ನೂತನ ಕೊಠಡಿಗಳನ್ನು ಶಾಸಕ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಶನಿವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ 11ವರ್ಷಗಳಿಂದ ಪೂರ್ವ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಅದರಲ್ಲೂ ಶೈಕ್ಷಣಿಕ ಮೈಲಿಗಲ್ಲು ಸಾಧಿಸಲು ಕೋಟ್ಯಂತರ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಆರ್.ಕೆ. ಪಾಟೀಲ ಶಾಲೆಯಲ್ಲಿ 3.5 ಕೋಟಿ ರೂ. ಗಳಲ್ಲಿ ನೂತನ ಕಟ್ಟಡ ನಿರ್ವಿುಸಲಾಗುತ್ತಿದ್ದು, ಸದ್ಯ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ನಿರ್ವಿುಸಲಾದ ಎರಡು ಕೊಠಡಿಗಳನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.
ಶಾಲೆಯಲ್ಲಿ 2.80ಲಕ್ಷ ರೂ.ವೆಚ್ಚದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು.
ಸ್ಮಾರ್ಟ್ಕ್ಲಾಸ್ಗೆ ಚಾಲನೆ
ಬಳಿಕ ಸೋನಿಯಾಗಾಂಧಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಸ್ಮಾರ್ಟ್ಕ್ಲಾಸ್ಗೆ ಅಬ್ಬಯ್ಯ ಚಾಲನೆ ನೀಡಿದರು. ಜಾಗತೀಕರಣಕ್ಕೆ ತಕ್ಕಂತೆ ಡಿಜಿಟಲ್ ಜಗತ್ತಿಗೆ ಸಮವಾಗಿ ಪ್ರಾಜೆಕ್ಟರ್ ಮೂಲಕ ಪರದೆಯ ಮೇಲೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ಬೋಧಿಸಲು ಇದು ಸಹಕಾರಿಯಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೆಲ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ಗಳನ್ನು ನಿಯಮಿತವಾಗಿ ಬಳಸದೇ ಇರುವ ಬಗ್ಗೆ ದೂರುಗಳಿವೆ. ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡುವ ಮೂಲಕ ಯೋಜನೆಯ ಸಫಲತೆಗೆ ಶ್ರಮಿಸಿ ಎಂದು ಶಾಸಕರು ಶಿಕ್ಷಕರಿಗೆ ಸೂಚಿಸಿದರು.
ಮುಖಂಡರಾದ ಮೋಹನ ಅಸುಂಡಿ, ಯಮನೂರ ಜಾಧವ, ಹನುಮಂತಗೌಡ ಪಾಟೀಲ, ಬಸನಗೌಡ ಪಾಟೀಲ, ರಾಕೇಶ ಪಲ್ಲಾಟೆ, ರಾಜಕುಮಾರ ಕಾಮರೆಡ್ಡಿ, ಬಾಗಣ್ಣ ಬಿರಾದಾರ, ಜಮಾಲ್ಸಾಬ್ ನದಾಫ್, ಶಾಂತಮ್ಮ ಹಿರೇಮಠ, ಗೀತಾ ಪಾಟೀಲ, ರೇಷ್ಮಾ ನದಾಫ್, ಮಂಜುನಾಥ ಚಿಂತಗಿಂಜಲ, ಸಾವಿತ್ರಿ ಕುರಗುಂದ, ಇತರರು ಇದ್ದರು.