ಅರಕೇರಾ: ತಾಲೂಕಿನ ಹಾಳ ಜಾಡಲದಿನ್ನಿ ಗ್ರಾಮದಲ್ಲಿ ಸರ್ಕಾರಿ ಗೈರಾಣು ಭೂಮಿ ಅತಿಕ್ರಮಣ ಮಾಡಲಾಗಿದ್ದು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪತಹಸೀಲ್ದಾರ್ ಮನೋಹರ ನಾಯಕಗೆ ಗುರುವಾರ ಮನವಿ ಸಲ್ಲಿಸಿದರು.
ಗ್ರಾಮ ಘಟಕದ ಅಧ್ಯಕ್ಷ ನಾಗರಾಜ ದೇವರಮನಿ ಮಾತನಾಡಿ, ಹಾಳಜಾಡಲದಿನ್ನಿ ಗ್ರಾಮದ ಸರ್ವೇ ನಂ.7 ರಲ್ಲಿರುವ 7 ಎಕರೆ 11 ಗುಂಟೆಗೆ ಜಮೀನನ್ನು ಅತಿಕ್ರಮಣ ಮಾಡುವ ಮೂಲಕ ಕೃಷಿ ಚಟುವಟಿಕೆಗಳನ್ನು ನಡೆಸಿದ್ದಾರೆ. 20 ವರ್ಷಗಳಿಂದ ಅತಿಕ್ರಮಣ ನಡೆಯುತ್ತಿದ್ದು, ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನು ಓದಿ: ಶಾಲಾ-ಕಾಲೇಜುಗಳಿಗೆ ಹೆಚ್ಚಿನ ಅನುದಾನ
ಈ ಕುರಿತು ಹಲವು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತೆರವುಗೊಳಿಸಲು ನಿರ್ಲಕ್ಷಿಸಿದರೆ ಪ್ರತಿಭಟನೆ ಮಾಡಲಾಗುವುದು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 185 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಕ್ಕಳು ಬಯಲಲ್ಲೇ ಅಭ್ಯಾಸ ಮಾಡಬೇಕಿದೆ. ಹೊಸ ಶಾಲೆ ನಿರ್ಮಿಸಲು ಅನುದಾನ ಮಂಜೂರು ಮಾಡಿದಲ್ಲಿ ಅನುಕೂಲವಾಗಲಿದೆ. ಹಾಳ ಜಾಡಲದಿನ್ನಿಯಲ್ಲಿ ಎಸ್ಸಿ,ಎಸ್ಟಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.