ಮೈಸೂರು: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ರಹದಾರಿಯಾಗಿದೆ ಎಂದು ಡಿಸಿಪಿ ಎಂ.ಮುತ್ತುರಾಜ್ ಹೇಳಿದರು.
ಸೇಂಟ್ ಥಾಮಸ್ ವಿದ್ಯಾಸಂಸ್ಥೆಯ ವತಿಯಿಂದ ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ‘ವಸಂತೋತ್ಸವ-2023’ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದಿಂದ ಮನುಷ್ಯ ಸರ್ವಾಂಗೀಣ ಪ್ರಗತಿ ಸಾಧ್ಯ. ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ, ಉತ್ತಮ ಪ್ರಜೆ, ಮಾನವೀಯತೆ, ನೈತಿಕೆ ಬೆಳೆಯಲಿದೆ ಎಂದರು.
ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಗುರುಗಳ ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಆರೋಗ್ಯ, ದೈಹಿಕ ಸದೃಢತೆ ಹೊಂದಬೇಕು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಚ್.ಕೆ.ಪಾಂಡು ಮಾತನಾಡಿ, ಜೀವನ ಸುಧಾರಿಸಲು, ಬದಲಿಸಲು, ಉನ್ನತಿಯೆಡೆಗೆ ಕೊಂಡೊಯ್ಯಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುತ್ತದೆ. ಇದು ಜೀವಮಾನದ ಪ್ರಕ್ರಿಯೆಯಾಗಿದೆ ಎಂದರು.
ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುವುದು ಎಲ್ಲಕಿಂತ ಮೊದಲು ಆದ್ಯತೆ ಆಗಬೇಕು. ಶಿಕ್ಷಣವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಜ್ಞಾನ, ಕೌಶಲ ಬೆಳೆಸುತ್ತದೆ. ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸ್ಯಾಮ್ ಚರಿಯನ್ ಕುಂಬುಕಾಟ್ಟು, ಖಜಾಂಚಿ ಪ್ರೊ.ಶೋಭನ್ ಥಾಮಸ್, ಸೆರಿಯನ್ ಚರ್ಚ್‌ನ ಗ್ರೇಸಿ ಥಾಮಸ್ ಇನ್ನಿತರರಿದ್ದರು.
ಶಾಲಾ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. 2022-23ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನಡೆದವು.