ಜಿಲ್ಲೆ

ರಾಜ್ಯ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಜ್ಜರಕಾಡಿನ ಯುದ್ಧ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ, ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ನೀಡದೆ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ವಿಶೇಷವಾಗಿ ಉಡುಪಿ ದಕ್ಷಿಣ ಕನ್ನಡ ಭಾಗದ ಮನೆಗಳಲ್ಲಿ ಬೀಡಿ ಕಟ್ಟಿ ಜೀವನ ನಡೆಸುವವರ ಬಡ ಮಕ್ಕಳಿಗೆ ಬರುವ ವಿದ್ಯಾರ್ಥಿ ವೇತನ ಬಾರದೆ ಇರುವುದರಿಂದ ಬಹಳ ಸಮಸ್ಯೆ ಆಗುತ್ತಿದೆ ಎಂದರು.

ನಗರ ಕಾರ್ಯಕಾರಿಣಿ ಸದಸ್ಯೆ ಮಂಗಳಗೌರಿ ಮಾತನಾಡಿ, ಎಸ್.ಎಸ್.ಪಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ತಾಂತ್ರಿಕ ಶಿಕ್ಷಣ ಹಾಗೂ ಇತರೆ ಇಲಾಖೆಯಡಿಯಲ್ಲಿ ಬರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾರದೆ ಉಡುಪಿಯು ಸೇರಿದಂತೆ ರಾಜ್ಯಾದ್ಯಂತ ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ವಂಚಿರಾಗುತ್ತಿರುವುದು ಖಂಡನಿಯ ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ ರಾಜ್ಯ ಸರ್ಕಾರ ವಾರದೊಳಗಾಗಿ ಸಮಸ್ಯೆ ಪರಿಹಾರ ನೀಡದಿದ್ದರೆ ಉಡುಪಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.