ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾಜ್ಯೋತಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. 
ಜಿಲ್ಲೆ

ಕೆನರಾ ಬ್ಯಾಂಕ್‌ನಿಂದ ವಿದ್ಯಾರ್ಥಿ ವೇತನ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾಜ್ಯೋತಿ ಯೋಜನೆಯಡಿ ಜಿಲ್ಲೆಯ 57 ಶಾಖೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯ ಎಸ್ಸಿ , ಎಸ್ಟಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ನಗರದ ಬೇಲೂರು ರಸ್ತೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 352 ವಿದ್ಯಾರ್ಥಿನಿಯರಿಗೆ 14 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಪ್ರಾದೇಶಿಕ ಮುಖ್ಯಸ್ಥ ಅನಿಲ್ ಕುಮಾರ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರುಗಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲು ಕೆನರಾ ಬ್ಯಾಂಕ್‌ನಿಂದ ಪ್ರತಿ ವರ್ಷ ಡಾ. ಅಂಬೇಡ್ಕರ್ ವಿದ್ಯಾಜ್ಯೋತಿ ಯೋಜನೆ ಮೂಲಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅದರಂತೆ ಈ ವರ್ಷವೂ ಉತ್ತಮ ಅಂಕಪಡೆದ ವಿದ್ಯಾರ್ಥಿನಿಯರನ್ನು ಗುರುತಿಸಿ ಈ ವಿದ್ಯಾರ್ಥಿ ವೇತನ ನಿಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರು, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕರು, ಹಾಗೂ ಎಲ್ಲ ಶಾಖೆಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.