ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಹೊರ ದೇಶದಲ್ಲಿ ದುಡಿದು ತಾಯ್ನಡಿನ ಅಶಕ್ತ ಪ್ರತಿಭೆಗಳಿಗೆ ಶಕ್ತಿ ತುಂಬುವ ಕಾರ್ಯ ಅಭಿನಂದನೀಯ. ಬಿಲ್ಲವ ಅಸೋಸಿಯೇಶನ್ ರಿಯಾದ್ ಸೌದಿ ಅರೇಬಿಯಾ ವತಿಯಿಂದ ನಡೆಯುತ್ತಿರುವ ಪ್ರೋತ್ಸಾಹ ಕಾರ್ಯ ಶ್ಲಾಘನೀಯ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಮೂಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಶ್ರೀ ಜಯ ಸುವರ್ಣ ಸಭಾಭವನದಲ್ಲಿ ಭಾನುವಾರ ಬಿಲ್ಲವ ಅಸೋಸಿಯೇಶನ್ ರಿಯಾದ್ ಸೌದಿ ಅರೇಬಿಯಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಶಕ್ತಿ ತುಂಬಲು ಶ್ರಮಿಸುವ ಅಸೋಸಿಯೇಶನ್ ಕಾರ್ಯ ಸ್ತುತ್ಯರ್ಹವಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ತಲುಪುವಂತಾಗಬೇಕು ಎಂದರು.
ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಕೆ.ಸಿ.ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ಮುಂಬೈ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಮಂಗಳೂರು ಎ.ಜೆ. ಇನ್‌ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ.ಕಿರಣ್ ಕುಮಾರ್ ಪಿ.ಕೆ., ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ ಬಾಳ ಮತ್ತಿತರರು ಉಪಸ್ಥಿತರಿದ್ದರು.
ಮಲ್ಲಿಕಾ ರಕ್ಷಿತ್ ಅತ್ತಾವರ ಸ್ವಾಗತಿಸಿದರು. ಕಿರಣ್ ನಿರಂಜನ್ ಪ್ರಸ್ತಾವನೆಗೈದರು. ಪದ್ಮಾ ಪೂಜಾರಿ ಒಡಿಲ್ನಾಳ ನಿರೂಪಿಸಿದರು. ಬಳಿಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.