ಜಿಲ್ಲೆ

ಸಾಮಾಜಿಕ ಜಾಲತಾಣದಿಂದ ಭವಿಷ್ಯ ಹಾಳು: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆತಂಕ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ಬಳಕೆಯಿಂದಾಗಿ ಯುವಜನತೆ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಓದುವ ಸಮಯದಲ್ಲಿ ಇಂತಹ ಹವ್ಯಾಸಗಳಿಂದ ದೂರ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓದುವ ಸಮಯದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋದರೆ ವಿದ್ಯಾಭ್ಯಾಸದ ಗತಿ ಏನು?. ಮೊಬೈಲ್‌ನ್ನು ದೂರ ಇಟ್ಟು ಅವಶ್ಯಕತೆ ಇದ್ದಲ್ಲಿ ಮಾತ್ರ ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್‌ನವರ ಒತ್ತಡದಿಂದಾಗಿ ಕೆಲವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾಲ ವಾಪಸ್ ಕೊಡಲು ಸ್ವಲ್ಪ ಸಮಯಾವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ಸಮಾಜದ ಬಗ್ಗೆ ಕಾಳಜಿ ಇರುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ವಸೂಲಾತಿಗೆ ತೊಡಗಿಸಿಕೊಳ್ಳಬೇಕು. ಸಾಲ ಕೊಡುವಾಗ ಅವರು ವಾಪಸ್ ಕೊಡಲು ಶಕ್ತರೇ, ಅವರ ಆಧಾಯ ಮೂಲದ ಬಗ್ಗೆ ದೃಢಪಡಿಸಿಕೊಳ್ಳಬೇಕು ಎಂದು ಮೈಕ್ರೋ ಫೈನಾನ್ಸ್‌ನವರಿಗೆ ತಿಳಿ ಹೇಳಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ಸ್ಪರ್ಧೆಯೊಡ್ಡುತ್ತಿವೆ. ಇದಕ್ಕೆ ನಾವೂ ಸಹ ಒಗ್ಗಿಕೊಂಡು ಸ್ಪರ್ಧೆಗೆ ಅಣಿಯಾಗಬೇಕು. ಹಿಂದೆ ಎರಡು ಮೂರನೇ ತರಗತಿ ವ್ಯಾಸಂಗ ಮಾಡಿದ್ದರೆ ಸುಲಭವಾಗಿ ಕರೆದು ಕೆಲಸ ಕೊಡುತ್ತಿದ್ದರು. ಆದರೀಗ ಶೇ.90ರಷ್ಟು ಅಂಕ ಪಡೆದರೂ ಏನೂ ಮಾಡಲಾಗದಂತಹ ಸ್ಥಿತಿಯಲ್ಲಿದ್ದೇವೆ. ಸತತ ಅಭ್ಯಾಸ, ಪರಿಶ್ರಮ ಹಾಗೂ ತಾಳ್ಮೆಯಿಂದ ಎಲ್ಲವನ್ನೂ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ಅರುಣ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯಾ, ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಸಿಇಒ ಎಸ್.ಕುಮಾರ್, ರಾಜ್ಯ ಶಾಖೆ ಮುಖ್ಯಸ್ಥ ಜಗದೀಶ್, ಸಿಎಸ್‌ಆರ್ ಮ್ಯಾನೇಜರ್ ಪಂಡಿತ್ ಜಿ.ಪಾಟೀಲ್, ಸಹಾಯಕ ವ್ಯವಸ್ಥಾಪಕ ಪ್ರಶಾಂತ್‌ಕುಮಾರ್, ಸಿಒಒ ಎಸ್.ಪಂಚಾಕ್ಷರಿ ಇತರರಿದ್ದರು.