ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದ ಕರಾವಳಿಯ ಜಿಲ್ಲೆಗಳು ನಿರಂತರವಾಗಿ ಶೈಕ್ಷಣಿಕ ಸಾಧನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಐಟಿ, ವೈದ್ಯಕೀಯ ಕ್ಷೇತ್ರದಲ್ಲಷ್ಟೇ ತೊಡಗಿಸಿಕೊಳ್ಳುತ್ತಿದ್ದಾರೆ. ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭಾರತೀಯ ಆಡಳಿತ ಸೇವೆಯಲ್ಲಿ ತೊಡಗಿಕೊಳ್ಳಲು ಆಸಕ್ತಿ ವಹಿಸಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದರು.
ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ದ.ಕ. ಮೀನು ಮಾರಾಟ ಫೆಡರೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಎಸ್ಎಸ್ಎಲ್ಸಿ, ದ್ವೀತಿಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದ 1,050 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿ ಕಾವಲು ಪೊಲೀಸ್ ಪಡೆಯ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಎಚ್. ಮಾತನಾಡಿ, ತಾವೆಲ್ಲರೂ ದೇಶದ ಭವ್ಯ ಭವಿಷ್ಯದ ಅಡಿಪಾಯವಾಗಿದ್ದೀರಿ. ಯುವ ಜನತೆ ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಇಂತಹ ಸಂಸ್ಥೆಗಳು ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ ಸದುಪಯೋಗ ಮಾಡಿಕೊಳ್ಳಬೇಕು. ಸಮಾಜಕ್ಕೆ ಆಸ್ತಿಯಾಗುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಆಳ ಸಮುದ್ರ ಮೀನುಗಾರಿಕಾ ಪ್ರಾ.ಸೇ. ಸಹಕಾರಿ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ, ಫೆಡರೇಷನ್ ಉಪಾಧ್ಯಕ್ಷ ದೇವಪ್ಪ ಕಾಂಚನ್ ಉಪಸ್ಥಿತರಿದ್ದರು.
ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಫೆಡರೇಷನ್ ವ್ಯವಸ್ಥಾಪಕ ನಿರ್ದೇಶಕಿ ದರ್ಶನಾ ಕೆ.ಟಿ. ವಂದಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆ ಮೂಲಕ ಬದುಕು ರೂಪಿಸಿಕೊಂಡು ಭಾರತದ ಕೀರ್ತಿ ಬೆಳಗಬೇಕು. | ಪ್ರೊ. ಡಾ.ನಿಕೇತನಾ. ಕನ್ನಡ ಉಪನ್ಯಾಸಕಿ, ಡಾ. ಜಿ.ಶಂಕರ್ ಕಾಲೇಜು