ಎಸ್‌ಡಿಎಂನ ಪ್ರಸಕ್ತ ವರ್ಷದ ವಿದ್ಯಾರ್ಥಿವೇತನ ಯೋಜನೆಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಚಾಲನೆ ನೀಡಿದರು. 
ಜಿಲ್ಲೆ

ಸದುಪಯೋಗವಾಗಲಿ ವಿದ್ಯಾರ್ಥಿವೇತನ : ಡಿ.ಹರ್ಷೇಂದ್ರ ಕುಮಾರ್

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶೈಕ್ಷಣಿಕ ಬದುಕಿನ ಸುಗಮ ನಿರ್ವಹಣೆಗಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶ ವಿದ್ಯಾರ್ಥಿ ವೇತನದ ಪರಿಕಲ್ಪನೆಯ ಹಿಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್‌ನ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ನಿರತರಾಗಿರುವ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿರುವ 1.35 ಕೋಟಿ ರೂ.ವಿದ್ಯಾರ್ಥಿ ವೇತನ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲಿ ನಕಾರಾತ್ಮಕ ಹವ್ಯಾಸಗಳಿಗೆ ಆಕರ್ಷಿತರಾಗದೆ ಅಧ್ಯಯನಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸಂಸ್ಥೆಯು ನೀಡುವ ಈ ವಿದ್ಯಾರ್ಥಿವೇತನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಈಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಮಾತನಾಡಿ, ಕಾರ್ಯದರ್ಶಿಯಾಗಿದ್ದ ದಿ.ಡಾ.ಬಿ.ಯಶೋವರ್ಮ ಅವರೂ ವಿದ್ಯಾರ್ಥಿವೇತನ ಅನುಷ್ಠಾನಕ್ಕೆ ವಿಶೇಷ ಕಾಳಜಿ ವಹಿಸಿದ್ದರು ಎಂದರು. ಶಿಕ್ಷಣ ಸಂಸ್ಥೆಗಳ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ.ಉಪಸ್ಥಿತರಿದ್ದರು.

ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿದರು. ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಂದಿಸಿದರು. ಸಹಪ್ರಾಧ್ಯಾಪಕರಾದ ಮಧು ಕೆ. ನಿರೂಪಿಸಿದರು.