ತಿರುಪತಿ: ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶ್ರೀಸಿದ್ಧಾಂತ ಶಿಖಾಮಣಿ ಆಧರಿತ ಶಕ್ತಿವಿಶಿಷ್ಟಾದ್ವೆತ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೇಶ-ವಿದೇಶಗಳಿಂದ ಆಗಮಿಸಿರುವ ವಿದ್ವಾಂಸರು ವಿವಿಧ ವಿಷಯಗಳನ್ನು ಮಂಡಿಸಿದರು.
ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಮೊದಲೆರಡು ದಿನದಲ್ಲಿ 15ಕ್ಕೂ ಹೆಚ್ಚು ವಿದ್ವಾಂಸರು ವಿವಿಧ ವಿಷಯಗಳ ಕುರಿತು ತಮ್ಮ ವಿಚಾರ ಮಂಡಿಸಿದರು.
ಶಿವಾದ್ವೆತ ಸಿದ್ಧಾಂತದಲ್ಲಿ ಶಿವಸ್ವರೂಪ, ಶಕ್ತಿಸ್ವರೂಪ, ಜಗತ್‌ಸ್ವರೂಪ, ಬಂಧ-ಮೋಕ್ಷ ಸ್ವರೂಪ, ಅಷ್ಟಾವರಣ, ಅಷ್ಟಾವರಣದಲ್ಲಿ ಗುರು ಲಿಂಗ ಜಂಗಮ, ಷಟ್‌ಸ್ಥಲ, ವರ್ಣಮಯ, ಸಿದ್ಧಾಂತ ಪ್ರತಿಪಾದಕರು, ಸಂಸ್ಥಾಪಕರು, ಪರ್ಯಾಯನಾಮ, ಬ್ರಹ್ಮಸೂತ್ರ ಭಾಷ್ಯ, ಶಕ್ತಿಸ್ತುತಿ, ಮೋಕ್ಷೋಪಾಯಗಳು, ಪಿಂಡಜ್ಞಾನ, ಭಕ್ತಿಮಾರ್ಗ ಇತ್ಯಾದಿ ವಿಷಯಗಳ ಕುರಿತು ಪ್ರಸಿದ್ಧ ವಿದ್ವಾಂಸರಾದ ಪ್ರೊ.ನಾರಾಯಣ ಪೂಜಾರ್, ಪ್ರೊ.ಕಮಲೇಶ್ ಜ್ಹಾ, ಡಾ.ಸಿದ್ಧಿದಾತ್ರಿ ಭಾರದ್ವಾಜ್, ಪ್ರೊ.ಗಣಪತಿ ಭಟ್, ಡಾ.ರಾಜಾರಾಮ್ ಶುಕ್ಲಾ, ಡಾ.ಮಹಾಂತಲಿಂಗ ಸ್ವಾಮೀಜಿ, ಡಾ. ಶಿವಕುಮಾರ ಸ್ವಾಮೀಜಿ, ಡಾ.ಗೊರಟ ರಾಜಶೇಖರ ಸ್ವಾಮೀಜಿ, ಡಾ. ಸಿ. ಶಿವಕುಮಾರಸ್ವಾಮಿ, ಡಾ.ಕೋರಂ ಬಸವರಾಜ್ ಸೇರಿದಂತೆ ವಾರಾಣಾಸಿ, ಹೈದ್ರಾಬಾದ್, ಚೆನ್ನೈ, ಪುಣೆ, ಬೆಂಗಳೂರು, ಯುಎಸ್‌ಎ, ಜರ್ಮನಿ, ಬಾಂಗ್ಲಾದಿಂದ ಬಂದಿರುವ ವಿದ್ವಾಂಸರುಗಳು ತಮ್ಮ ವಿಷಯ ಮಂಡಿಸಿದರು.
ಸಮಾರಂಭದಲ್ಲಿ ಕಡಗಂಚಿ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ವೇದಾಂತ ವಿಭಾಗದ ಮುಖ್ಯಸ್ಥ ಡಾ.ಗಣಪತಿ ಭಟ್, ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಿಂಧಗಿ ಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಸರ್ಪಭೂಷಣ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ತಿರುಪತಿ ವಿಶ್ವವಿದ್ಯಾಲಯದ ಪ್ರಾದ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.