ಚಿಕ್ಕಮಗಳೂರು: ಪ್ರಧಾನ ಮಂತ್ರಿ ಜನ್‌ಜಾತೀಯ ಉನ್ನತ್ ಗ್ರಾಮ ಅಭಿಯಾನ ಯೋಜನೆಗೆ ಜಿಲ್ಲೆಯ ೩ ಗ್ರಾಮಗಳು ಆಯ್ಕೆಯಾಗಿವೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿಯ ಮಲ್ನಾಡು ಗ್ರಾಮ, ಕೊಪ್ಪ ತಾಲೂಕಿನ ಗುಡ್ಡೇತೋಟ ಗ್ರಾಮ ಪಂಚಾಯಿತಿಯ ಮೇಗೂರು ಗ್ರಾಮ ಹಾಗೂ ಅಜ್ಜಂಪುರ ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿ ಭೂತನಹಳ್ಳಿ ಗ್ರಾಮಗಳು ಈ ಯೋಜನೆಗೆ ಆಯ್ಕೆಯಾಗಿವೆ ಎಂದು ಮಾಹಿತಿ ನೀಡಿದರು.
ದೇಶದ ೬೩ ಸಾವಿರ ಬುಡಕಟ್ಟು ಗ್ರಾಮಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಐದು ಕೋಟಿ ಬುಡಕಟ್ಟು ಜನರಿಗೆ ಸವಲತ್ತುಗಳನ್ನು ನೀಡುತ್ತದೆ. ಮುಖ್ಯವಾಗಿ ಬುಡಕಟ್ಟು ಕುಟುಂಬಗಳು ವಾಸಿಸುವ ಗ್ರಾಮಗಳು ಮತ್ತು ಮಹತ್ವಕಾಂಕ್ಷೆಯ ಜನರಿಗೆ ಸಾಮಾಜಿಕ, ಆರ್ಥಿಕ ಸೌಲಭ್ಯ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಮಾದರಿ ವಸತಿ ಶಾಲೆಗಳು ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿಯ ಯೋಜನೆ ಇದಾಗಿದೆ. ಪ್ರತಿ ಪರಿಶಿಷ್ಟ ವರ್ಗದ ಕಾಲನಿಯ ಅಭಿವೃದ್ಧಿಯನ್ನು ೨೦.೩೯ ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುವುದು. ಈ ಸಂಬAಧ ಸಂಬAಧಪಟ್ಟ ಇಲಾಖೆಗಳು ಸೆಪ್ಟೆಂಬರ್ ಅಂತ್ಯದೊಳಗೆ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಈ ೩ ಗ್ರಾಮಗಳ ಸರ್ವೆ ಕಾರ್ಯ ಕೈಗೊಂಡು ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಭಾಗೀರಥಿ ಮತ್ತಿತರರಿದ್ದರು.