ಜಿಲ್ಲೆ

ಮೇ 5 ರಿಂದ ಪರಿಶಿಷ್ಟ ಒಳ ಜಾತಿಗಳ ಸಮೀಕ್ಷೆ

Uttara Kannada - Subash Hegde

ಕಾರವಾರ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಸಮೀಕ್ಷೆ ನಡೆಸಲು ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ. ಮೇ.5 ರಿಂದ ಸಮೀಕ್ಷೆ ಪ್ರಾರಂಭವಾಗಲಿದ್ದು, ಸಮೀಕ್ಷಕರು, ಎಸ್‌ಸಿ ಕುಟುಂಬಗಳು ಮಾತ್ರವಲ್ಲದೇ ಜಿಲ್ಲೆಯ ಪ್ರತಿ ಮನೆಗಳಿಗೂ ತೆರಳಿ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಿದ್ದಾರೆ. ಮೇ 17 ರವರೆಗೆ ಈ ಸಮೀಕ್ಷೆ ನಡೆಯಲಿದೆ. ನಂತರ ಮೇ 25 ಒಳಗೆ ಪ್ರತಿ ಗ್ರಾಮದಲ್ಲಿ ಸಮುದಾಯದ ಸಭೆಯೊಂದನ್ನು ನಡೆಸಿ ಯಾವುದೇ ಎಸ್‌ಸಿ ಕುಟುಂಬ ಸಮೀಕ್ಷೆಯಿಂದ ಬಿಟ್ಟು ಹೋಗದ ಬಗ್ಗೆ ದೃಢೀಕರಣ ಮಾಡಲಾಗುವುದು. ಪರಿಶಿಷ್ಟ ಜಾತಿಯ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ವಿವಿಧ ಆಯೋಗಗಳ ವರದಿ ಹಾಗೂ ಸಮುದಾಯಗಳ ಆಗ್ರಹದ ಹಿನ್ನೆಲೆಯಲ್ಲಿ ಸರ್ಕಾರ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿದೆ. ಆದರೆ, ಪರಿಶಿಷ್ಟ ಜಾತಿಯಲ್ಲಿ ವಿವಿಧ 101 ಉಪ ಜಾತಿಗಳಿದ್ದು, ಅವರ ಅಧಿಕೃತ ಜನಸಂಖ್ಯೆ ಹಾಗೂ ಈಗಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸಮೀಕ್ಷೆಯನ್ನು ಈಗ ಕೈಗೊಳ್ಳಲಾಗಿದೆ. ಆಯೋಗದ ಸೂಚನೆಯಂತೆ ಸಮಾಜ ಕಲ್ಯಾಣ, ಕಂದಾಯ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಸಮೀಕ್ಷೆ ನಡೆಯಲಿದೆ.

1601 ಸಮೀಕ್ಷಕರು:

ಹೇಗೆ ಸಮೀಕ್ಷೆ ನಡೆಸಬೇಕು ಎಂಬ ಬಗ್ಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಜಿಲ್ಲೆಯ ಐವರು ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ ನೀಡಲಾಗಿದೆ. ಪ್ರತಿ ತಾಲೂಕಿಗೆ 5 ರಂತೆ ಒಟ್ಟು 60 ಜನ ಹೈಸ್ಕೂಲ್ ಶಿಕ್ಷಕರನ್ನು ತಾಲೂಕು ಮಟ್ಟದ ತರಬೇತಿದಾರನ್ನಾಗಿ ನೇಮಕ ಮಾಡಲಾಗಿದೆ. ಸೋಮವಾರ ಜಿಲ್ಲಾಽಕಾರಿ ಕಚೇರಿಯ ಸಭಾಂಗಣದಲ್ಲಿ ತಾಲೂಕು ಮಟ್ಟದ ತರಬೇತಿದಾರರಿಗೆ ಸಮೀಕ್ಷೆಯ ತರಬೇತಿ ನೀಡಲಾಯಿತು.

ಜಿಲ್ಲೆಯ 1445 ಚುನಾವಣೆ ಬೂತ್‌ಗಳಿಗೆ ಒಬ್ಬರಂತೆ ಶಿಕ್ಷಕರನ್ನು ಸಮೀಕ್ಷಕರನ್ನಾಗಿ ನೇಮಿಸಲಾಗಿದೆ. 156 ಹೆಚ್ಚುವರಿ ಸಮೀಕ್ಷಕರನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಹೆಚ್ಚಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಮೀಕ್ಷಕರನ್ನಾಗಿ ನೇಮಿಸಲಾಗಿದೆ. ಪ್ರತಿ 10 ರಿಂದ 12 ಬೂತ್‌ಗಳಿಗೆ ಒಬ್ಬರಂತೆ ಒಟ್ಟು 144 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, 19 ಜನರನ್ನು ಕಾಯ್ದಿರಿಸಲಾಗಿದೆ.

ಏನೇನು ಸಮೀಕ್ಷೆ..?

ವೈಟ್ ಲಿಸ್ಟ್ ಎಂಬ ಆ್ಯಪ್ ಮೂಲಕ ಸಮೀಕ್ಷೆ ನಡೆಯಲಿದೆ. ಪ್ರತಿ ಮನೆಯ ಯಜಮಾನನ ಹೆಸರು, ಆತನ ಆಧಾರ ಕಾರ್ಡ್, ಮತದಾರರ ಕಾರ್ಡ್ ಮಾಹಿತಿ ಹಾಕುತ್ತಿದ್ದಂತೆ ಆ ಕುಟುಂಬದ ವಿವರ ಅದರಲ್ಲಿ ತೆರೆದುಕೊಳ್ಳಲಿದೆ. ಆ ಕುಟುಂಬ ಪರಿಶಿಷ್ಟ ಜಾತಿಗೆ ಸೇರಿದ್ದರೆ ಅವರ ಹೆಚ್ಚಿನ ವಿವರ ಪಡೆಯಬೇಕು. ಇಲ್ಲದಿದ್ದಲ್ಲಿ ಅಲ್ಲಿಗೇ ಸಮೀಕ್ಷೆ ಮುಕ್ತಾಯವಾಗಲಿದೆ. ಪರಿಶಿಷ್ಟ ಜಾತಿಗೆ ಕುಟುಂಬ ಸೇರಿದ್ದಲ್ಲಿ ಯಜಮಾನನ ಜಾತಿ, ಉಪ ಜಾತಿ ಆತನ ಉದ್ಯೋಗ, ಶಿಕ್ಷಣ, ಮಕ್ಕಳು, ಪತ್ನಿಯ ಶಿಕ್ಷಣ ಉದ್ಯೋಗ, ಅವರ ಮನೆಯಲ್ಲಿರುವ ಸೌಲಭ್ಯಗಳ ಬಗ್ಗೆ ವಿವರಗಳನ್ನು ಭರ್ತಿ ಮಾಡಬೇಕಿದೆ.

ಎಷ್ಟು ಕುಟುಂಬಗಳು

2011 ರ ಜನಗಣತಿಯಂತೆ ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ 18,219 ಗ್ರಾಮೀಣ ಪ್ರದೇಶದಲ್ಲಿ 8,398 ಸೇರಿ ಒಟ್ಟು 26,611 ಪರಿಶಿಷ್ಟ ಜಾತಿಯ ಕುಟುಂಬಗಳಿದ್ದವು. ನಗರ ಪ್ರದೇಶದಲ್ಲಿ 37,572 ಗ್ರಾಮೀಣ ಪ್ರದೇಶದಲ್ಲಿ 78,859 ಸೇರಿ ಒಟ್ಟು 1,16,413 ಪರಿಶಿಷ್ಟ ಜಾತಿಯ ಜನಸಂಖ್ಯೆ ಇತ್ತು. 2023 ರಲ್ಲಿ 1,25,106 ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಸಮೀಕ್ಷೆಯಿಂದ ನಿಖರ ಲೆಕ್ಕ ಸಿಗಲಿದೆ.

ತರಬೇತಿ

ಗಣತಿದಾರರು ಸಮೀಕ್ಷೆಗೆ ತೆರಳುವಾಗ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಬೇಕು. ಭೇಟಿಯ ವೇಳೆ ಕುಟುಂಬಸ್ಥರಿಗೆ ತಮ್ಮ ಪರಿಚಯ ಮತ್ತು ಭೇಟಿಯ ಉದ್ದೇಶವನ್ನು ತಿಳಿಸಿ, ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದರು.

ಸಮೀಕ್ಷೆಯ ತಾಲೂಕು ಮಟ್ಟದ ತರಬೇತುದಾರರಿಗಾಗಿ ಜಿಲ್ಲಾಽಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತಮಗೆ ನಿಗದಿಪಡಿಸಿರುವ ಬ್ಲಾಕ್‌ಗಳಲ್ಲಿ ಯಾವುದೇ ಕುಟುಂಬ ಸಮೀಕ್ಷೆಯಿಂದ ತಪ್ಪಿ ಹೋಗದಂತೆ, ಯಾವುದೇ ಕುಟುಂಬದ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗದಂತೆ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸಮೀಕ್ಷಾ ಕಾರ್ಯಕ್ಕಾಗಿ ನೀಡಿರುವ ಕೋಡ್‌ಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಮೊಬೈಲ್ ಆಪ್‌ನಲ್ಲಿ ದಾಖಲಿಸಬೇಕು. ಸಮೀಕ್ಷೆ ಸಂದರ್ಭದಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಎಸ್‌ಸಿ ಒಳಮೀಸಲಾತಿ ಸಮೀಕ್ಷೆಯಿಂದ ಸಂಗ್ರಹಿಸುವ ದತ್ತಾಂಶ ಅತಿ ಮುಖ್ಯವಾಗಿದೆ. ಮುಂದೆ ಮೀಸಲಾತಿ, ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಈ ದತ್ತಾಂಶ ಆಧಾರವಾಗಿದೆ. ಇದರಿಂದ ಕುಟುಂಬಗಳು ಮನೆಗೆ ಭೇಟಿ ನೀಡುವ ಸಮೀಕ್ಷಕರಿಗೆ ಸರಿಯಾದ ಮಾಹಿತಿ ನೀಡಬೇಕು. ತಮ್ಮ ಜಾತಿ, ಉಪ ಜಾತಿ, ಶಿಕ್ಷಣ, ಉದ್ಯೋಗ ಮುಂತಾದ ಸಾಮಾಜಿಕ ಪರಿಸ್ಥಿತಿ ನಿಗದಿ ಮಾಡುವ ವಿವರಗಳನ್ನು ನೀಡಬೇಕು. ವೈ.ಕೆ.ಉಮೇಶ್ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ