ಜಿಲ್ಲೆ

ಮೇ೨೫ ರವರೆಗೆ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ವಿಸ್ತರಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂಬಂಧ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲು ಮೇ೨೫ ರವರೆಗೆ ವಿಸ್ತರಿಸಲಾಗಿದ್ದು, ಮೇ೨೦ ರೊಳಗೆ ಶೇ.೧೦೦ ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ಮೇ೨೫ ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ಅವಕಾಶ ಮಾಡಿದೆ. ಆದರೂ ಸಹ ಮೇ೨೦ ರೊಳಗೆ ಪೂರ್ಣಗೊಳಿಸಬೇಕು. ಸಮೀಕ್ಷೆ ಬ್ಲಾಕ್ ವ್ಯಾಪ್ತಿಯಲ್ಲಿ ಮೇ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ನಿಗದಿಪಡಿಸಲಾಗಿದೆ. ಹಾಗೆಯೇ ಮೇ೧೯ ರಿಂದ ೨೮ ರವರೆಗೆ ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೇ೨೬ ರಿಂದ ೨೮ ರವರೆಗೆ ನಡೆಯುವ ವಿಶೇಷ ಶಿಬಿರದಲ್ಲಿ ಸಮೀಕ್ಷೆಯಲ್ಲಿ ಗಣತಿದಾರರು ಘೋಷಿತ ಮತಗಟ್ಟೆಗಳಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಮನೆ ಮನೆ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬದವರು ಶಿಬಿರಕ್ಕೆ ಆಗಮಿಸಿದಾಗ ಸುಸೂತ್ರವಾಗಿ ಸಮೀಕ್ಷೆ ಕೈಗೊಳ್ಳಲು ಆಯೋಗ ತಿಳಿಸಿದೆ ಎಂದು ಹೇಳಿದ್ದಾರೆ.

ಮೇ೫ ರಿಂದ ನಡೆಯುತ್ತಿರುವ ಸಮೀಕ್ಷೆಯು ಕೊಡಗು ಜಿಲ್ಲೆಯಲ್ಲಿ ಶೇ.೭೮.೫೬ ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ೮ನೇ ಸ್ಥಾನದಲ್ಲಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿದ್ದಾರೆ.