ಜಿಲ್ಲೆ

ಕುಂದು-ಕೊರತೆ ಸಭೆಗೆ ಪರಿಶಿಷ್ಟರ ಬಹಿಷ್ಕಾರ

ಬೆರಳೆಣಿಕೆಯಷ್ಟು ಜನರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾ ಪೊಲೀಸ್​ ವರಿಷ್ಠ ಕುಶಾಲ್​ ಚೌಕ್ಸೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಮಸ್ಯೆ ಆಲಿಸಿ, ಪರಿಹರಿಸಲು ಕರೆದಿದ್ದ ಜಿಲ್ಲಾಮಟ್ಟದ ಕುಂದುಕೊರತೆ ಸಭೆಯು 2ನೇ ಬಾರಿ ಕೂಡ ಬಹಿಷ್ಕಾರದಿಂದ ಮುಂದೂಡಲ್ಟಟ್ಟಿದೆ.

ನಗರದ ಅಂಬೇಡ್ಕರ್​ ಭವನದಲ್ಲಿ ಜಿಲ್ಲಾ ಪೊಲೀಸ್​ ಇಲಾಖೆಯಿಂದ ಬುಧವಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ ಸಕಾಲಕ್ಕೆ ಎಸ್ಪಿ, ಡಿವೈಎಸ್ಪಿ ಸೇರಿ ಪ್ರಮುಖ ಅಧಿಕಾರಿಗಳು ಬರಲಿಲ್ಲ. ಇದರಿಂದ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದರು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಂದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್​ ಚೌಕ್ಸೆ ಸ್ಥಳದಲ್ಲಿದ್ದ ಬೆರಳೆಣಿಕೆಯ ಜನರಿಂದ ಅಹವಾಲು ಸ್ವೀಕರಿಸಿದರು.

ಮೊದಲು ಸೆ.20ಕ್ಕೆ ಸಭೆ ನಿಗದಿಯಾಗಿತ್ತು. ಆಗ ಜನರ ಕೊರತೆಯಿಂದ ಎಲ್ಲರ ಅಭಿಪ್ರಾಯದಂತೆ ಸೆ.23ಕ್ಕೆ ಮುಂದೂಡಲಾಗಿತ್ತು. ಮಧ್ಯಾಹ್ನ 3ಕ್ಕೆ ಎಡಿಜಿಪಿ ತುರ್ತು ಭೇಟಿ ಹಿನ್ನೆಲೆಯಲ್ಲಿ ಒಂದು ಗಂಟೆ ತಡವಾಗಿ ಆರಂಭಿಸಲಾಗಿದೆ. ಇದನ್ನೇ ದೊಡ್ಡದು ಮಾಡಿಕೊಂಡು ಕೆಲವರು ಸಭೆಯಿಂದ ಹೊರ ನಡೆದಿದ್ದಾರೆ. ಇದರ ನಡುವೆಯೂ ಅಹವಾಲು ಆಲಿಸಲಾಗಿದೆ. ಜಿಲ್ಲಾ ಪೊಲಿಸ್​ ಇಲಾಖೆಯ ಬಾಗಿಲು ಸದಾ ತೆರೆದಿರಲಾಗುತ್ತದೆ. ಜನರು ಬಂದು ಅರ್ಜಿಗಳನ್ನು ಸಲ್ಲಿಸಿ, ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ ಎಂದು ತಿಳಿಸಿದರು.

ದಲಿತ ಮುಖಂಡರ ಬಹಿಷ್ಕಾರ

ಜಿಲ್ಲಾ ಪೊಲೀಸ್​ ಠಾಣೆಗಳಲ್ಲಿ ದಲಿತರ ಮೇಲೆ ದಾಖಲಾಗಿರುವ ಸುಳ್ಳು ಕೇಸ್​ ಕೈಬಿಡಬೇಕು. ಕಾಲ ಕಾಲಕ್ಕೆ ದಲಿತರ ಕುಂದುಕೊರತೆ ಸಭೆ ನಡೆಸಿ ಸಮಸ್ಯೆ ಆಲಿಸಬೇಕು. ಆದರೆ ಇದು ಜಿಲ್ಲೆಯ ಸರ್ಮಪಕವಾಗಿ ನಡೆಯುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು.

ಗ್ರಾಮಗಳಲ್ಲಿ ಗಸ್ತು ಸಭೆಗಳು ನಿಂತು ಹೋಗಿವೆ. ಈಗಲಾದರೂ ಚುರುಕುಗೊಳಿಸಬೇಕು.ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ.ಪ್ರಕರಣ ದಾಖಲಿಸದೇ ಹಣ ಪಡೆಯಲಾಗುತ್ತಿದೆ. ದೂರು ದಾಖಲಿಸಲು ಹೋದರೆ ಪ್ರತಿ ದೂರು

ದಾಖಲಿಸುತ್ತಿದ್ದಾರೆ ಎಂದು ದೂರಿದರು.