ಜಿಲ್ಲೆ

ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಮುಕ್ತ ಪ್ರವೇಶ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಮಂಡ್ಯ: ಸರ್ಕಾರಿ ಸ್ಥಳಗಳಲ್ಲಿರುವ ಸ್ಮಶಾನದಲ್ಲಿ ಎಲ್ಲ ಸಮುದಾಯದವರು ಯಾವುದೇ ಬೇದ ಭಾವವಿಲ್ಲದೆ ಅಂತ್ಯಸಂಸ್ಕಾರ ಮಾಡಲು ಮುಕ್ತ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶವಸಂಸ್ಕಾರವನ್ನು ಪ್ರತಿಯೊಬ್ಬರು ಗೌರವಯುತವಾಗಿ ಮಾಡಬೇಕು. ಕೆ.ಆರ್.ಪೇಟೆ ಟೌನ್‌ನಲ್ಲಿ ವಾಸಿಸುತ್ತಿರುವ 64 ಜನ ಪೌರ ಕಾರ್ಮಿಕ ಕುಟುಂಬಕ್ಕೆ ವಿತರಿಸಲು ಒಂದು ವಾರದೊಳಗೆ ಹೊಸಹೊಳಲು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಲಭ್ಯವಿರುವ 7 ಎಕರೆ ಜಾಗವನ್ನು ಸರ್ವೇ ಮಾಡುವುದರ ಜತೆಗೆ ನಿವೇಶನ ಕೊಡಿಸುವ ಕಾರ್ಯ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಿಂಡಿಗನವಿಲೆ, ಮಂಗರಹಳ್ಳಿಯಿಂದ ಹಿರಸಾವೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ ಎನ್ನುವ ಕಾರಣಕ್ಕೆ ಸುಮಾರು ವರ್ಷದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿಲ್ಲ ಎನ್ನುವ ದೂರು ಕೇಳಿಬಂದಿದೆ. ಈ ಸಂಬಂಧ ನಿಗಮದ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ. ಸಾಧ್ಯತೆ ಇದ್ದರೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದ ಡಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಂದು ಕೊರತೆಗಳು ಜಿಲ್ಲಾಮಟ್ಟದಲ್ಲಿ ಚರ್ಚೆಯಾಗುವ ವಿಷಯಗಳು ತಾಲೂಕು ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿದರೆ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ತಮ್ಮ ಗ್ರಾಮದಲ್ಲಿ ಕೆರೆ, ರಸ್ತೆ ಹಾಗೂ ಸ್ಮಶಾನ ಅಭಿವೃದ್ಧಿಪಡಿಸಿಕೊಡಬೇಕು ಎಂದು ಕುಂದುಕೊರತೆ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ವಿಶೇಷವಾಗಿ ಪರಿಗಣಿಸಿ ನರೇಗಾ ಯೋಜನೆಯಡಿ ತಯಾರಿಸುವ ಕ್ರಿಯಾ ಯೋಜನೆಯಲ್ಲಿ ನಿಯಮಾನುಸಾರ ಪರಿಶೀಲಿಸಿ ಪ್ರಥಮ ಆದ್ಯತೆ ನೀಡಿ ಸೇರಿಸಿಕೊಳ್ಳಿ. ಸರ್ಕಾರದ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳನ್ನು ಹರಾಜು ಮಾಡುವಾಗ ಪೌರಕಾರ್ಮಿಕರಿಗೆ ಮೀಸಲಾತಿ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗುವುದು ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಲು ಗ್ರಾಮ ಮಟ್ಟದಲ್ಲಿ ಸಭೆ ನಡೆಸಲು ಸೂಚನೆ ನೀಡಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕ ವಾಸವಿರುವ ದಲಿತ ಕುಟುಂಬದವರಿಗೆ ಪೌತಿ ಖಾತೆ ಮಾಡಿಕೊಡುವ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಮಾಹಿತಿ ಮತ್ತು ವಾಸವಿರುವ ಕುಟುಂಬಸ್ಥರ ಬಳಿ ಇರುವ ಮಾಹಿತಿಯನ್ನು ಪರಿಶೀಲಿಸಿ ಪೌತಿ ಖಾತೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಿತಿ ರಚಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಪೊಲೀಸ್ ಇಲಾಖೆಯಲ್ಲಿ ದಾಖಲಿಸುವ ಪ್ರಕರಣಗಳಲ್ಲಿ ಸರಿಯಾಗಿ ಚಾರ್ಜ್‌ಶೀಟ್ ಆಗುತ್ತಿಲ್ಲ ಎಂದು ಕೆಲವು ಮುಖಂಡರು ಸಭೆಯಲ್ಲಿ ಚರ್ಚಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಈ ಕುರಿತು ತಾವೇ ಖುದ್ದು ಪರಿಶೀಲಿಸಿ ವರದಿ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.