ಜಿಲ್ಲೆ

ಬಿಬಿಎಂಪಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ವೇಳಾಪಟ್ಟಿ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕೈಗೊಳ್ಳಲು ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈ ವಿಶೇಷ ಪರಿಷ್ಕರಣೆಗೆ ಅರ್ಹತಾ ದಿನಾಂಕವನ್ನು 2024ರ ಜ.1 ಎಂಬುದಾಗಿ ನಿಗದಿಪಡಿಸಲಾಗಿದೆ. ಈ ದಿನಾಂಕದಂದು 18 ವರ್ಷ ತುಂಬುವವರು ಮತದಾರ ಪಟ್ಟಿಯ ಯಾದಿಗೆ ಸೇರ್ಪಡೆ ಹೊಂದಲು ಅವಕಾಶ ಕಲ್ಪಿಸಲು ಬಿಬಿಎಂಪಿ ನಿರ್ಧರಿಸಿದೆ.

ಮತಗಟ್ಟೆಗಳ ಪುನರ್‌ರಚನೆ ಕೈಗೊಳ್ಳುವ ಗಡುವನ್ನು ಅ.9ಕ್ಕೆ ವಿಸ್ತರಿಸಿದ್ದು, ಕರಡು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲು ಅ.26ರ ವರೆಗೆ ಮರುನಿಗದಿ ಮಾಡಲಾಗಿದೆ. ಈ ಪ್ರಕ್ರಿಯೆ ಆಧರಿಸಿ ಮತದಾರರ ಸಮಗ್ರ ಕರಡು ಪಟ್ಟಿ ಹೊರಡಿಸುವ ದಿನಾಂಕವನ್ನು ಅ.27ಕ್ಕೆ ಮರು ನಿಗದಿಗೊಳಿಸಲಾಗಿದೆ. ಆಕ್ಷೇಪಣೆಗೆ ಡಿ.9ರ ವರೆಗೆ ಅವಕಾಶವಿದ್ದು, ಡಿ.26ರೊಳಗೆ ಆಕ್ಷೇಪಣೆ-ಸಲಹೆಗಳ ಅರ್ಜಿಗಳನ್ನು ವಿಲೇ ಮಾಡಬೇಕಿದೆ.

ಈ ಎಲ್ಲ ಚಟುವಟಿಕೆಗಳ ಬಳಿಕ ಮುಂಬರುವ ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಪರಿಷ್ಕೃತ ದಿನಾಂಕವನ್ನು ಬಿಬಿಎಂಪಿಯ ಚುನಾವಣಾ ವಿಭಾಗದ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.