ಜಿಲ್ಲೆ

ಗ್ರಾಹಕರ ಸೇವೆಯ ಮುಂಚೂಣಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ -ಡಾ.ಎಂ.ಎನ್.ರಾಜೇಂದ್ರ ಕುಮಾರ್

Mangaluru - Hariprasad Rai


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್ ) ತನ್ನ 113 ಶಾಖೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುತ್ತಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ
ಯೋಜನೆಯನ್ನು ಬ್ಯಾಂಕ್ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಶಾಖಾ ಮಟ್ಟದಲ್ಲಿ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸ್ಪಂದಿಸಿರುವುದರಿಂದ ಬ್ಯಾಂಕಿಗೆ ಸತತ ಕಳೆದ ಮೂರು ವರ್ಷಗಳಿಂದ ಎಪಿವೈ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಈ ಬಾರಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಥಮ ಪ್ರಶಸ್ತಿ ಲಭಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಶನಿವಾರ ಬ್ಯಾಂಕಿನ ಸಿಬ್ಬಂದಿಗೆ ಗಿಫ್ಟ್ ಕೂಪನ್ ವಿತರಣೆ ಹಾಗೂ ಶಾಖಾ ಮಟ್ಟದಲ್ಲಿ ಸಮಗ್ರ ಸಾಧನೆಗೈದ ಸಿಬ್ಬಂದಿಗಳನ್ನು ಪುರಸ್ಕರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ ಈ ಪ್ರತಿಷ್ಠಿತ ಅವಳಿ ಪ್ರಶಸ್ತಿಗಳು ಬ್ಯಾಂಕಿನ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂದರು.
ಬ್ಯಾಂಕಿನ ಸಿಬ್ಬಂದಿ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ ಅವರು ಬ್ಯಾಂಕಿನ ಅಧ್ಯಕ್ಷರಿಂದ 10 ಸಾವಿರ ರೂ. ಮೌಲ್ಯದ ಗಿಫ್ಟ್ ಕೂಪನ್ ಸ್ವೀಕರಿಸಿದರು. 2023-24ನೇ ಸಾಲಿನಲ್ಲಿ ಬ್ಯಾಂಕ್ ನೀಡಿದ ಗುರಿ ಸಾಧಿಸಿದ ಶಾಖಾ ವ್ಯವಸ್ಥಾಪಕರನ್ನು , ತಾಲೂಕು ಮಟ್ಟದಲ್ಲಿ ಸಮಗ್ರ ಸಾಧನೆಗೈದ ಸಿಬ್ಬಂದಿಯನ್ನು ಹಾಗೂ ಎಪಿವೈ ಯೋಜನೆಯಲ್ಲಿ ಗುರಿ ಸಾಧಿಸಿದ ಶಾಖಾ ವ್ಯವಸ್ಥಾಪಕರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ಬ್ಯಾಂಕಿನ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಮಾತನಾಡಿ ಬ್ಯಾಂಕಿನ ಸಿಬ್ಬಂದಿಗಳ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದರು. ಸಿಬ್ಬಂದಿಗಳ ಪರವಾಗಿ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕ ಸಂತೋಷ್, ಉಪ್ಪುಂದ ಶಾಖೆಯ ವ್ಯವಸ್ಥಾಪಕ ಶಂಕರ್ ಶೆಟ್ಟಿ ಮಾತನಾಡಿ ಬ್ಯಾಂಕಿನ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ , ನಿರ್ದೇಶಕರುಗಳಾದ ಟಿ.ಜಿ.ರಾಜರಾಮ ಭಟ್, ಭಾಸ್ಕರ್.ಎಸ್. ಕೋಟ್ಯಾನ್ , ಶಶಿಕುಮಾರ್ ರೈ ಬಾಲ್ಯೊಟ್ಟು , ಎಸ್. ಬಿ. ಜಯರಾಮ್ ರೈ, ಮೋನಪ್ಪ ಶೆಟ್ಟಿ ಎಕ್ಕಾರು , ಹರಿಶ್ಚಂದ್ರ , ಜೈರಾಜ್ ಬಿ.ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್ ಉಪಸ್ಥಿತರಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಉಪ ಮಹಾಪ್ರಬಂಧಕಿ ವಿದ್ಯಾ ಕಾರ್ನಾಡು ವಂದಿಸಿದರು. ಉಪ ಮಹಾಪ್ರಬಂಧಕ ನಿತ್ಯಾನಂದ ಶೇರಿಗಾರ್ ಹಾಗೂ ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ ಕಾರ್ಯಕ್ರಮ, ನಿರೂಪಿಸಿದರು.