ಜಿಲ್ಲೆ

ಮುನಿದ ವರುಣ.. ಬರಿದಾದ ಬೆಟ್ಟ-ಬೇಣ

ದೀಪಕ ತಲವಾಯಿ

ಶಿವಪ್ರಸಾದ ಹಿರೇಕೈ ಶಿರಸಿ

ಪ್ರಸಕ್ತ ವರ್ಷದ ಮಳೆಗಾಲದ ಸ್ಥಿತಿ ಮಲೆನಾಡಿನ ಕರಡದ ಬೇಣಗಳಿಗೆ ಪೂರಕವಾಗಿಲ್ಲ. ಇದರಿಂದಾಗಿ ಹುಲ್ಲು ಸಮರ್ಪಕವಾಗಿ ಬೆಳೆಯದೆ ಹೈನುಗಾರಿಕೆಯ ಮೇಲೆ ಆತಂಕ ಉಂಟುಮಾಡಿದೆ. ಮಲೆನಾಡಿನ ಹೈನುಗಾರಿಕೆಯಲ್ಲಿ ಕರಡದ ಬೇಣದ ಹುಲ್ಲು ಪ್ರಧಾನ. ಡಿಸೆಂಬರ್ ಅಂತ್ಯದ ವೇಳೆ ಈ ಹುಲ್ಲನ್ನು ಕತ್ತರಿಸಿ ಗೊಣಬೆ ಹಾಕಿಟ್ಟು ಮೇವಾಗಿ ಬಳಸುತ್ತಾರೆ. ಇದಲ್ಲದೆ, ಮೇವಿಗೆ ಹೆಚ್ಚಾದ ಹುಲ್ಲನ್ನು ಅಡಕೆ ತೋಟಗಳಲ್ಲಿ ಕಳೆ ಏಳದಂತೆ ಹೊದಿಕೆಗಾಗಿ ಬಳಸುತ್ತಾರೆ.

ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಅಡಕೆ ಕೃಷಿಗಾಗಿ ಒಂದು ಎಕರೆಗೆ ಒಂಬತ್ತು ಎಕರೆ ಸೊಪ್ಪಿನ ಬೆಟ್ಟವನ್ನು ನೀಡಲಾಗಿದೆ. ಅದೇ ಉದ್ದೇಶಕ್ಕೆ ಬೆಟ್ಟಗಳು ಈಗಲೂ ಬಳಕೆಯಾಗುತ್ತಿವೆ. ಮರ-ಗಿಡಗಳು ಜಾಸ್ತಿ ಇರದ ಸೊಪ್ಪಿನ ಬೆಟ್ಟವನ್ನು ಪಹಣಿ ಪತ್ರಿಕೆಗಳಲ್ಲಿ ಬೇಣ ಎಂದೇ ದಾಖಲಿಸಲಾಗಿದೆ. ಇದರ ಜೊತೆ ಸೊಪ್ಪಿನ ಬೆಟ್ಟಗಳಲ್ಲೂ ಮರಗಳನ್ನು ಕಾಯ್ದುಕೊಂಡು ಹುಲ್ಲನ್ನು ಹಿಂದಿನಿಂದಲೂ ಬೆಳೆಯಲಾಗುತ್ತಿದೆ.

ಕರಡದ ಬೇಣ ಮತ್ತು ಸೊಪ್ಪಿನ ಬೆಟ್ಟದಲ್ಲಿ ಹುಲ್ಲಿಗೆ ಬೆಳವಣಿಗೆ ಆಗಲು ಪೂರಕ ವಾತಾವರಣ ಲಭಿಸಿಲ್ಲ. ಸಾಮಾನ್ಯವಾಗಿ ಮೊದಲ ಮಳೆಗೆ ಕರಡದ ಹುಲ್ಲು ಮೊಳಕೆ ಒಡೆಯುತ್ತವೆ. ದೀಪಾವಳಿವರೆಗೂ ಬೆಳವಣಿಗೆ ಹೊಂದಿ, ಡಿಸೆಂಬರ್‌ನಲ್ಲಿ ಕಟಾವಿಗೆ ಬರುತ್ತದೆ. ಆದರೆ, ಮಲೆನಾಡಿನಲ್ಲಿ ಈ ವರ್ಷ ಆರಂಭದ ಮಳೆಯೇ ತಡವಾಗಿದೆ. ಜೂನ್ 26ರ ನಂತರ ಮಳೆ ಆರಂಭವಾಗಿದೆ. ಆ ಬಳಿಕ ಉತ್ತಮ ಮಳೆಯಾಗಿದ್ದರಿಂದ ಕರಡದ ಹುಲ್ಲು ಚಿಗುರಿದೆ. ಈಗ ಎಲ್ಲೆಡೆ ಅರ್ಧ ಅಡಿಯಷ್ಟು ಹುಲ್ಲು ಬೆಳೆದಿದೆಯಾದರೂ ಮಳೆಗಾಲ ಮತ್ತೆ ಕೈ ಕೊಟ್ಟಿದೆ. ಕಳೆದ ಒಂದು ವಾರದಿಂದ ಮಳೆ ಸಂಪೂರ್ಣ ನಿಂತು, ಬಿಸಿಲ ಝಳ ಎಲ್ಲೆಡೆ ಜೋರಾಗಿದೆ. ಇದರಿಂದಾಗಿ ಬೆಳೆಯ ಬೇಕಿದ್ದ ಹುಲ್ಲು ಬಿಸಿಲಿಗೆ ಸುಟ್ಟು ಬೆಳವಣಿಗೆ ನಿಲ್ಲಿಸಿದೆ. ಒಂದೊಮ್ಮೆ ಮತ್ತೆ ಮಳೆ ಆರಂಭವಾದರೂ ಈ ವರ್ಷ ಹುಲ್ಲಿನ ಬೆಳವಣಿಗೆ ಪ್ರತಿ ವರ್ಷದಂತೆ ಸಾಧ್ಯವಾಗುವುದಿಲ್ಲ.

ಕೊಟ್ಟಿಗೆಗಳಲ್ಲಿ ಇಳಿದ ಆಕಳ ಸಂಖ್ಯೆ: ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡಲಾಗಿದ್ದರೂ ಮಲೆನಾಡಿನ ಹೈನುಗಾರಿಕೆಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದೆ. ಕಳೆದ ಬೇಸಿಗೆಯಲ್ಲಿ ಕಾಡಿರುವ ಚರ್ಮಗಂಟು ಕಾಯಿಲೆಯಿಂದಾಗಿ ಶಿರಸಿ, ಸಿದ್ದಾಪುರ ತಾಲೂಕಿನ ಹೈನುಗಾರರು ಈಗಾಗಲೇ ಹೈರಾಣಾಗಿದ್ದಾರೆ. ಆಕಳು ಗರ್ಭ ಧರಿಸುವಿಕೆಯ ಪ್ರಮಾಣ ಕ್ಷೀಣಿಸಿದೆ. ರೋಗದ ಕಾಟ ತಾಳಲಾರದೆ ಹಲವರು ಹಸುಗಳನ್ನು ಮಾರಾಟ ಸಹ ಮಾಡಿದ್ದಾರೆ. ಹೀಗಾಗಿ, ಮಲೆನಾಡಿನ ಅನೇಕ ಕೊಟ್ಟಿಗೆಗಳಲ್ಲಿ ಆಕಳ ಸಂಖ್ಯೆ ಒಂದಕ್ಕೆ ಇಳಿದಿದೆ. ಇನ್ನೊಂದೆಡೆ ಹಾನಗಲ್-ಹಾವೇರಿ ಭಾಗದಿಂದ ಬಿಳೆಹುಲ್ಲು ಬರಬೇಕಿದ್ದು, ಪ್ರತಿ ಪಿಂಡಿಗೆ 45-50 ರೂ. ದರವಾಗಿದೆ. ಇಂಥ ಸ್ಥಿತಿಯಲ್ಲಿ ಕೃಷಿಕರ ಮೇವಿನ ಪ್ರಮುಖ ಆಧಾರವಾಗಿದ್ದ ಕರಡದ ಬೇಣಗಳೂ ಅತಂತ್ರವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.