ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಶಾಲಾ ವಾರ್ಷಿಕೋತ್ಸವದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಮಾತನಾಡಿದರು. 
ಜಿಲ್ಲೆ

ದುರಾಸೆಯ ರೋಗದಿಂದ ಹಗರಣಗಳು ಹೆಚ್ಚು

ಶನಿವಾರಸಂತೆ: ದೇಶದ ಅಭಿವೃದ್ದಿಯಾಗುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಹಗರಣಗಳು, ಭ್ರಷ್ಟಾಚಾರಗಳು ಹೆಚ್ಚಾಗಲು ದುರಾಸೆಯೇ ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಹೆಗಡೆ ಬೇಸರ ವ್ಯಕ್ತಪಡಿಸಿದರು.

ಸಮೀಪದ ಆಲೂರುಸಿದ್ದಾಪುರದಲ್ಲಿ ಶನಿವಾರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ 20ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಲಂಚ, ಭ್ರಷ್ಟಾಚಾರ, ಹಗರಣಗಳಂತಹ ಅನ್ಯಾಯಗಳು ಆಗಲು ವ್ಯಕ್ತಿಯ ತಪ್ಪಲ್ಲ. ಅದು ಸಮಾಜದ ತಪ್ಪು. ಜನರು ಅನ್ಯಾಯದ ಕೆಲಸ ಮಾಡಿಸಲು ಅಧಿಕಾರಿಗಳಿಗೆ ಲಂಚ ಕೊಡುತ್ತಾರೆ. ಇದರಿಂದ ಭ್ರಷ್ಟಾಚಾರದ ಸಮಾಜ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದಶಕಗಳಿಂದ ಬಂದು ಹೋದ ಸರ್ಕಾರಗಳಿಂದ ಸಾವಿರಾರು ಹಗರಣಗಳು ನಡೆದಿವೆ. ಹಗರಣಗಳ ಹಣದಿಂದ ದೇಶವನ್ನೇ ಅಭಿವೃದ್ಧಿ ಪಡಿಸಬಹುದಾಗಿತ್ತು. ಆದರೆ ದುರಾಸೆಯ ಪ್ರತಿಫಲದಿಂದ ಹಗರಣಗಳು ಮಾತ್ರ ಅಭಿವೃದ್ಧಿಯಾಗಿದೆ ಎಂದರು.

ಇಂದಿನ ಸಮಾಜದಲ್ಲಿ ಜನರು ಶ್ರೀಮಂತಿಕೆಯನ್ನು ಪೂಜಿಸುತ್ತಾರೆ. ಆದರೆ ಪ್ರಾಮಾಣಿಕತೆಗೆ ಸಮಾಜದಲ್ಲಿ ಗೌರವ ಇರುವುದಿಲ್ಲ. ದೇಶದಲ್ಲಿಂದು ಭ್ರಷ್ಟಾಚಾರ, ಹಗರಣದ ಪ್ರಕರಣಗಳಲ್ಲಿ ಭಾಗಿಯಾದ ಭ್ರಷ್ಟರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುತ್ತಿಲ್ಲ ಎಂದ ಅವರು, ಪ್ರತಿಯೊಬ್ಬವರೂ ಪ್ರಾಮಾಣಿಕವಾಗಿ ನ್ಯಾಯವಾಗಿ ಹಣ, ಆಸ್ತಿ ಸಂಪಾದಿಸುವುದು ತಪ್ಪಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕತೆ, ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿದಂತೆಯೇ ಸಮಾಜವನ್ನು ಆಸ್ತಿಯನ್ನಾಗಿ ಮಾಡುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಆಲೂರುಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಕೆ.ಎನ್.ಭಾರತಿ ಮಾತನಾಡಿ, ಪಾಲಕರು ಮಕ್ಕಳಿಗೆ ತಾವೇ ಮಾದರಿಯಾಗುವಂತೆ ಬೆಳೆಸಬೇಕು. ಪಾಲಕರು ತಪ್ಪು ಮಾಡಿದರೆ ಮಕ್ಕಳು ಅದನ್ನೆ ಅನುಸರಿಸುತ್ತಾರೆ. ಅದೇ ರೀತಿ ಪಾಲಕರು ಶಿಕ್ಷಣದ ಅಂಕಪಟ್ಟಿಗೋಸ್ಕರವಾಗಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಬಾರದು ಎಂದ ಅವರು, ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ದೊರೆಯುತ್ತಿದೆ. ಆದರೆ ಸಂಸ್ಕಾರದ ಶಿಕ್ಷಣ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಸಂಸ್ಕಾರವನ್ನು ಕಲಿಸಿಕೊಡುವಂತೆ ಮನವಿ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಮನೋಜ್ ಬೋಪಯ್ಯ ಮಾತನಾಡಿ, ಮಕ್ಕಳು ಮತ್ತು ಶಾಲೆ ಭವಿಷ್ಯದ ಬುನಾದಿಗಳಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳು ವಿದ್ಯಾವಂತರಾಗುವ ಮೂಲಕ ದೇಶ ಮತ್ತು ಸಮಾಜವನ್ನು ಬದಲಾವಣೆ ಮಾಡುವ ಜಾವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಸಾಯಿ ಎಜುಕೇಷನ್ ಮ್ಯಾನೆಜಿಂಗ್ ಟ್ರಸ್ಟಿ ಎಚ್.ಕೆ.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯದರ್ಶಿ ಭರತ್‌ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ಸಾಯಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಟಿ.ಪಿ.ಜೀವನ್, ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರಜಿತ್ ಗೌಡ ಪಾಲ್ತಾಡು ದೇವಸ್ಯ, ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಮ್ಮ, ಆಲೂರುಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷೆ ವೀಣಾ, ಗ್ರಾ.ಪಂ.ಸದಸ್ಯರಾದ ಮಲ್ಲಪ್ಪ, ದಮಯಂತಿ, ಗೋಣಿಮರೂರು ಕ್ಲಸ್ಟರ್ ಸಿಆರ್‌ಪಿ ಆಶಾ, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಪಿಡಿಒ ಹರೀಶ್, ಪ್ರಮುಖರಾದ ಎಂ.ಎನ್.ರಾಜು ಮುಂತಾದವರಿದ್ದರು.