ಮಂಡ್ಯ: ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಬಹುಕೋಟಿ ಹಗರಣ ಮಾಡಲಾಗಿದೆ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.
2024 ಡಿ.19ರಿಂದ ಮೂರು ದಿನ ನಡೆದ ಸಮ್ಮೇಳನದ ನೆಪದಲ್ಲಿ ಕಸಾಪ ಅಧ್ಯಕ್ಷ, ಜಿಲ್ಲೆಯ ಅಧಿಕಾರಿಗಳು ಹಾಗೂ ಕರ್ನಾಟಕ ಸ್ಟೇಟ್ಸ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸ್ ಸಂಸ್ಥೆಯು ಭಾರಿ ಭ್ರಷ್ಟಾಚಾರ ಎಸಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ನಾಡು, ನುಡಿ, ನೆಲ-ಜಲದ ವಿಷಯವಾಗಿ ನಡೆಯಬೇಕಾದ ಸಮ್ಮೇಳನವು ವಿವಾದದ ಆಗರವಾಗಿದೆ. ಸಮ್ಮೇಳನದಲ್ಲಿನ ಭ್ರಷ್ಟಾಚಾರದ ಕುರಿತು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಕ್ಷನ್ 70 ಅಡಿ ತನಿಖೆಗೆ ಅವಕಾಶ ಮಾಡಿಕೊಡಬೇಕು. ಹಗರಣ ಸಂಬಂಧ ಅಧಿಕಾರಿಗಳ ಮೇಲೆ ಒತ್ತಡ ಹೇರಿರುವವರನ್ನು ಪತ್ತೆ ಹಚ್ಚಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮನು, ಮುದ್ದೇಗೌಡ, ಶಿವರಾಮು, ಆಟೋ ವೆಂಕಟೇಶ್ ಇದ್ದರು.