ಮೈಸೂರು: ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಮನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳನ್ನು ಸಾಧಿಸಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಮಾನವ ದಿನಗಳನ್ನು ಸಾಧಿಸುವಂತೆ ಆಯುಕ್ತರು ಸೂಚನೆ ನೀಡಿದರು.
ಭೌಗೋಳಿಕ ಬೆಳೆಗಳಾದ ಮೈಸೂರು ಮಲ್ಲಿಗೆ, ಮೈಸೂರು ವಿಳ್ಯೆದೆಲೆ ಮತ್ತು ನಂಜನಗೂಡು ರಸಬಾಳೆ ಬೆಳೆಗಳಿಗೆ ಮನರೇಗಾದಡಿ ವಿಶೇಷ ಒತ್ತು ನೀಡಬೇಕು. ಆ ಮೂಲಕ ಈ ವಿಶೇಷ ತಳಿಗಳನ್ನು ಉಳಿಸಬೇಕು. ಅಮೃತವಾಟಿಕೆ ಅಭಿಯಾನದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 75 ಸ್ಥಳೀಯ ತಳಿಗಳ ಗಿಡಗಳನ್ನು ನೆಟ್ಟು, ಪೋಷಿಸುವುದರ ಮೂಲಕ ಹಸಿರೀಕರಣಗೊಳಿಸಬೇಕು ಎಂದು ಸೂಚಿಸಿದರು.
ಸಭೆಯ ಬಳಿಕ ತಾಲೂಕಿನ ನಾಗವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗವಾಲ ಗ್ರಾಮದಲ್ಲಿ ಸಾಮಾಜಿಕ ಅರಣ್ಯದ ನರ್ಸರಿ, ಮನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕಲ್ಯಾಣಿ, ಉದ್ಯಾನ, ಸಾಕದೇವಮ್ಮ ಕಟ್ಟೆ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕ, ಶಿಶುಪಾಲನ ಕೇಂದ್ರವನ್ನು ವೀಕ್ಷಿಸಿದರು.
ಹುಣಸೂರು ತಾಲೂಕಿನ ಬಿಳಿಕೆರೆ, ಚಿಕ್ಕ ಬೀಚನಹಳ್ಳಿ, ಮರದೂರು, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಲೈಬ್ರರಿ, ರಸ್ತೆ ಬದಿಯ ನೆಡುತೋಪು, ಮನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕೆರೆ ಕೋಡಿ, ಡ್ರಾೃಗನ್ ಫ್ರೂಟ್ ಬೆಳೆ, ಇಂಗು ಗುಂಡಿಗಳನ್ನು ವೀಕ್ಷಿಸಿದರು.
ಈ ಸಂದರ್ಭ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶ್ರೀಶೈಲಾ ದಿಡ್ಡಿಮನಿ, ತಾಂತ್ರಿಕ ಜಂಟಿ ನಿರ್ದೇಶಕ ಪಿ.ಜಿ. ವೇಣುಗೋಪಾಲ್, ಉಪಕಾರ್ಯದರ್ಶಿ (ಅಭಿವೃದ್ಧಿ) ಎಂ.ಕೃಷ್ಣರಾಜು ಹಾಗೂ ಇತರರು ಇದ್ದರು.