ಕೊಪ್ಪಳ: ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ ಎನ್.ಮೂರ್ತಿ ಬಣದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
101 ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಸಮಾನವಾಗಿ ಹಂಚಿಕೆಯಾಗಿಲ್ಲ. ಹೀಗಾಗಿ ಒಳ ಮೀಸಲು ಜಾರಿಗೆ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಇದಕ್ಕೆ ಅನುಮತಿ ನೀಡಿದೆ. ಆದರೂ ರಾಜ್ಯದಲ್ಲಿ ಜಾರಿಗೆ ಪ್ರಯತ್ನಗಳು ನಡೆಯುತ್ತಿಲ್ಲ. ಈ ಮೂಲಕ ಅರ್ಹರಿಗೆ ಮತ್ತೆ ಅನ್ಯಾಯ ಮಾಡಲಾಗುತ್ತಿದೆ. ಸಂವಿಧಾನ ಮತ್ತು ಸವೋರ್ಚ್ಛ ನ್ಯಾಯಾಲಯದ ತೀರ್ಪಿಗೆ ಅಗೌರವ ತೋರುತ್ತಿದೆ. ಪರಿಶಿಷ್ಟರನ್ನು ತುಳಿವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಖಂಡಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಪಜಾಗಳ ಒಳ ಮೀಸಲಾತಿ ಜಾರಿ ಮಾಡಬೇಕು. 2023&25ನೇ ಸಾಲಿನಲ್ಲಿ ಪಜಾ, ಪಪಂ ಅನುದಾನ ದುರ್ಬಳಕೆ ಆಗಿದ್ದು, ವಾಪಸ್ ನೀಡಬೇಕು. ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ನೀಡಬೇಕು. ಒಳ ಮೀಸಲು ಹಂಚಿಕೆ ಆಗುವವರೆಗೆ ರಾಜ್ಯ, ಕೇಂದ್ರದ ನೇಮಕಾತಿ ಪ್ರಕ್ರಿಯೆ ನಿಲ್ಲಿಸಬೇಕು. ಖಾಸಗಿ ಉದ್ಯೋಗ, ಗುತ್ತಿಗೆ ಪದ್ಧತಿಯಲ್ಲೂ ಎಸ್ಸಿ, ಎಸ್ಟಿ ಮೀಸಲಾತಿ ಕಲ್ಪಿಸಿ. ಕೇಂದ್ರ ಸರ್ಕಾರವೂ ಎಸ್ಸಿ ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಕಾಯ್ದೆ ರಚಿಸಿ ಬಜೆಟ್ನಲ್ಲಿ ಅನುದಾನ ನೀಡಬೇಕೆಂದು ಒತ್ತಾಯಿಸಿದರು.