ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ-ಟಿಪ್ಪ ಣಿ ಮಾಡುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಯೋಜನೆಯಡಿ ಹಣ, ಸೌಲಭ್ಯಗಳನ್ನು ಪಡೆದುಕೊಳ್ಳಬೇಡಿಯೆಂದು ಕರೆ ನೀಡಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸವಾಲು ಹಾಕಿದ್ದಾರೆ.
ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ಹಣವನ್ನು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಹ ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳನ್ನಾಗಿ ಮಾಡುತ್ತೇವೆ ಎಂದು ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಣ್ಣು ಮುಚ್ಚಿಕೊಂಡು ಗ್ಯಾರಂಟಿ ಯೋಜನೆಗಳನ್ನು ಮಾಡಿಲ್ಲ. ಎಲ್ಲ ಲೆಕ್ಕಾಚಾರ ಮಾಡಿಕೊಂಡು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಬಡವರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದಿದ್ದೇವೆ. ಇದರಿಂದ ರಾಜ್ಯದ ಹಣಕಾಸು ನಿರ್ವಹಣೆಯಲ್ಲಿ ಕಷ್ಟವಾಗುತ್ತದೆ ನಿಜ, ಆದರೂ ನಿಭಾಯಿಸುತ್ತೇವೆ. 15 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹಣಕಾಸು ನಿರ್ವಹಣೆ ಗೊತ್ತಿದೆ ಎಂದು ಹೇಳಿದರು.
ರಾಜ್ಯದ ಹಣಕಾಸು ಸ್ಥಿತಿಯನ್ನು ಬಿಜೆಪಿಯವರು ಹಾಳು ಮಾಡಿದ್ದರು. ಅಧಿಕಾರದಲ್ಲಿ ಇದ್ದಾಗ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನೀರಾವರಿ ಇಲಾಖೆಯ ಕಾಮಗಾರಿಗಳ ದೊಡ್ಡ ಮೊತ್ತದ ಬಿಲ್ಗಳನ್ನು ಪಾವತಿಸಿರಲಿಲ್ಲ. ಈಗ ನಾವು ಪಾವತಿ ಮಾಡುತ್ತಿದ್ದೇವೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ, ಮಾಜಿ ಸಂಸದ ಐ.ಜಿ. ಸನದಿ, ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಅನ್ವರ ಮುಧೋಳ, ಮೋಹನ ಹಿರೇಮನಿ, ಶ್ರೀನಿವಾಸ ಬೆಳದಡಿ, ರಾಜಶೇಖರ ಮೆಣಸಿನಕಾಯಿ, ರಾಜಶೇಖರ ಕಮತಿ, ಇತರರು ಇದ್ದರು.