ತಿಪಟೂರು : ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಬುಧವಾರ ಸ್ಯಾಕ್ಸೋಫೋನ್ ಜುಗಲ್ ಬಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಸಕ ಕೆ.ಷಡಕ್ಷರಿ ಕಲಾವಿದರನ್ನು ಗೌರವಿಸಿ ಮಾತನಾಡಿ, ವಿವಾಹ, ಇನ್ನಿತರ ಸಭೆ ಸಮಾರಂಭಗಳಲ್ಲಿ ವಾದ್ಯಗೋಷ್ಠಿ ನಡೆಸುವುದು ಜೀವನಕ್ಕಾದರೆ, ಇಂತಹ ಸಭೆಗಳಲ್ಲಿ ತಮ್ಮಲ್ಲಿನ ಪ್ರತಿಭೆಯನ್ನು ಕಲೆಗಾಗಿ, ಸಂಗೀತ ಗೋಷ್ಠಿಗಳಲ್ಲಿ ಅನಾವರಣಗೊಳಿಸುತ್ತಾರೆ. ಈ ಆಸ್ಥಾನ ಮಂಟಪದಲ್ಲಿ ಪ್ರತಿಧ್ವನಿಯಿಂದಾಗಿ ನಾದ ಮಧುರವಾಗಿ ಹೊರಹೊಮ್ಮುವುದಿಲ್ಲ, ಮುಂದಿನ ವರ್ಷ ಈ ಸಭಾಂಗಣದ ಹೊರಭಾಗದಲ್ಲಿ ವೇದಿಕೆ ನಿರ್ಮಿಸಿ ಶ್ರೀನಿವಾಸ್ ಗುಣಶೇಖರ್ ಸಹಕಾರದಿಂದ ಸಂಗೀತ ವಾದ್ಯಗೋಷ್ಠಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಡಾ.ಪಿ.ಕೆ.ದಾಮೋದರ್ ಪುತ್ತೂರು, ಶ್ರೀನಿವಾಸ್ ಗುಣಶೇಖರ್ ಮತ್ತು ತಂಡದವರ ಅವಿರತ ಎರಡು ಗಂಟೆಗಳ ಸಂಗೀತ ರಸದೌತಣವನ್ನು ನೀಡಿದರು.
ಸವಿತಾ ಸಮಾಜ ಮತ್ತು ಸವಿತಾ ಕಲಾವಿದರ ಸಂಘದಿಂದ ಸಂಗೀತಗಾರರನ್ನು ಸನ್ಮಾನಿಸಲಾಯಿತು. ಮುಖಂಡರಾದ ಟಿ.ಸಿ.ಗೋವಿಂದರಾಜು, ಎಂ.ಡಿ.ಶಿವಕುಮಾರ್, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.