ಜಿಲ್ಲೆ

ಸಾವರ್ಕರ್ ಜೈಲಿಂದ ಬಿಡುಗಡೆಯಾಗಿದ್ದು ಕ್ಷಮಾಪಣಾ ಪತ್ರದಿಂದಲ್ಲ: ಚಕ್ರವರ್ತಿ ಸೂಲಿಬೆಲೆ ಹೇಳಿದ ಕಾರಣ ಹೀಗಿದೆ...

ಮಂಗಳೂರು: ವೀರ ಸಾವರ್ಕರ್ ಅಂಡಮಾನ್‌ನ ಕಾಲಾಪಾನಿ ಜೈಲಿನಿಂದ ಬಿಡುಗಡೆಯಾಗಿದ್ದು ಅವರು ಬರೆದ ಕ್ಷಮಾಪಣಾ ಪತ್ರದ ಕಾರಣಕ್ಕಾಗಿ ಅಲ್ಲ. ಬದಲಾಗಿ ಬ್ರಿಟಿಷರು ಜೈಲನ್ನು ಮುಚ್ಚಬೇಕು ಎಂದು ನಿರ್ಧರಿಸಿದ ಕಾರಣಕ್ಕಾಗಿ. ವಿಶ್ವಾದ್ಯಂತ ಅವರ ಬಿಡುಗಡೆಗಾಗಿ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಸೆರೆಯಿಂದ ಮುಕ್ತಗೊಳಿಸಲಾಗಿತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸಾವರ್ಕರ್ ನಿಂದನೆಗೆ ಪ್ರತ್ಯುತ್ತರ ನೀಡುವ ಸಲುವಾಗಿ ನಗರದ ಡೊಂಗರಕೇರಿ ಸುಧೀಂದ್ರ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಅನೇಕರು 1942ರ ನಂತರ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟ ಅಂದರೇನು? ಬೀದಿಯಲ್ಲಿ ಹೋರಾಟ ಮಾಡುವುದಷ್ಟೇ ಹೋರಾಟವಲ್ಲ. ಸ್ವಾತಂತ್ರ್ಯಕ್ಕಾಗಿ ಜನರ ಮನಸನ್ನು ಅಣಿಗೊಳಿಸುವುದು ಕೂಡ ಹೋರಾಟವೇ. ಸಾವರ್ಕರ್ ಬಗ್ಗೆ ಮಾಹಿತಿ ಇಲ್ಲದವರಿಗೆ ಅವರ ಜೀವನ ಅರ್ಥ ಆಗದು ಎಂದರು.

ಸಾವರ್ಕರ್ ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. ಭಾರತದಲ್ಲಿ ಮತ್ತು ಲಂಡನ್‌ನಲ್ಲಿ ಅವರು ಏನು ಮಾಡಿದ್ದರು ಎಂದು ಅವರ ಜೀನವನ್ನು ಅಧ್ಯಯನ ಮಾಡಿದರೆ ತಿಳಿಯುತ್ತದೆ. ಸಾವರ್ಕರ್ ಇದ್ದ ಕಾಲಾಪಾನಿ ಜೈಲಿನಲ್ಲಿ ನೆಹರು ಒಂದು ದಿನವೂ ಇರಲಿಲ್ಲ. ನೆಹರು ಜೈಲಿನಲ್ಲಿ ಇದ್ದದ್ದು ಹನ್ನೊಂದು ದಿನ ಮಾತ್ರ. ಅಷ್ಟರೊಳಗಾಗಲೇ ಅವರ ಅಪ್ಪ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಗೋಗರೆದು ಬಿಡಿಸಿಕೊಂಡಿದ್ದರು. ಆದರೆ ಸಾವರ್ಕರ್ ಹನ್ನೊಂದು ವರ್ಷ ಕಾಲಾಪಾನಿ ಶಿಕ್ಷೆ ಎದುರಿಸಿದ್ದರು. ಪ್ರತಿದಿನ ಅವರು ಗಾಣ ಸುತ್ತಿ 30 ಪೌಂಡ್ ಎಣ್ಣೆ ತೆಗೆಯಬೇಕಿತ್ತು. ಸಾವರ್ಕರ್ ಎರಡು ತಿಂಗಳಲ್ಲೇ ಕ್ಷಮಾಪಣೆ ಪತ್ರ ಬರೆದರು ಎಂದು ಕೆಲವರು ಹೇಳುತ್ತಾರೆ. 70 ಸಾವಿರ ಕೈದಿಗಳ ಪೈಕಿ ಸಾವರ್ಕರ್ ಒಬ್ಬರೇ ಪತ್ರ ಬರೆದಿದ್ದು ಎಂದು ಹೇಳಿದವನು ಮೂರ್ಖ. ಕ್ಷಮಾಪಣಾ ಪತ್ರ ಬರೆಯೋದು ಅಂದರೆ ಕೋರ್ಟ್‌ನಲ್ಲಿ ವಾದ ಮಾಡಿದ ಹಾಗೆ. ಸಾವರ್ಕರ್ ಒಬ್ಬರೇ ಕ್ಷಮಾಪಣಾ ಪತ್ರ ಬರೆದಿರೋದಲ್ಲ. ಅನೇಕ ಜನರು ಕ್ಷಮಾಪಣಾ ಪತ್ರ ಬರೆದಿದ್ದಾರೆ ಎಂದರು.

ಅಸ್ಪಶ್ಯತೆ ನಿವಾರಣೆಗೆ ಮಂದಿರ ಸ್ಥಾಪನೆ
ಏಳು ಬಾರಿ ಪತ್ರ ಬರೆದರೂ ಸಾವರ್ಕರ್‌ಗೆ ಕ್ಷಮಾಪಣೆ ಸಿಗಲಿಲ್ಲ. ಆದರೂ ಅವರನ್ನು ಕೆಲವರು ಬ್ರಿಟಿಷ್ ಏಜೆಂಟ್ ಎಂದು ಟೀಕಿಸುತ್ತಿರುವುದಾಗಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು. ಕಾಲಾಪಾನಿಯಿಂದ ಬಿಡುಗಡೆಯಾಗಿ ಬಂದರೂ, ಅವರನ್ನು ಹಲವು ವರ್ಷಗಳ ಕಾಲ ಸಾಬರಮತಿಯಲ್ಲಿ ಇರಿಸಲಾಯಿತು. ಬಳಿಕ ರತ್ನಗಿರಿ ಜಿಲ್ಲೆಯಲ್ಲಿ ಗೃಹ ಬಂಧನದಲ್ಲಿ ಇರಿಸಲಾಯಿತು. ಬಳಿಕ ಹೊರ ಬಂದ ಅವರು ಅಸ್ಪೃಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ರತ್ನಗಿರಿಯಲ್ಲಿ ಪತಿತ ಪಾವನ ಮಂದಿರ ಸ್ಥಾಪಿಸಿದರು ಎಂದರು.

ಕಿಚ್ಚು ಹಚ್ಚಿ ಪುಸ್ತಕ
ದಡ್ಡರು ಫೇಸ್‌ಬುಕ್‌ನಲ್ಲಿ ಸಾವರ್ಕರ್ ‘ತನಗೆ ತಾನೇ ಸ್ವಾತಂತ್ರ್ಯ ವೀರ ಅಂತಾ ಬಿರುದು ನೀಡಿದರು’ ಎಂದು ಕಮೆಂಟ್ ಹಾಕಿದ್ದಾರೆ. ಆದರೆ ಸಾವರ್ಕರ್‌ಗೆ 60 ವರ್ಷ ತುಂಬಿದ ಸಂದರ್ಭ ಮಠಾರ ಸಮಾಜ ಈ ಬಿರುದು ನೀಡಿದರು. ತನಗೆ ತಾನೇ ‘ಚಾಚಾ’ ಎಂದು ಕರೆಸಿಕೊಂಡತೆ ಅಲ್ಲ ಎಂದು ಸೂಲಿಬೆಲೆ ಕುಟುಕಿದರು. ಪುಸ್ತಕ ಮುದ್ರಣಕ್ಕೆ ಬರುವ ಮುನ್ನವೇ ಸಾವರ್ಕರ್ ಅವರ 1857ರ ಸ್ವಾತಂತ್ರ್ಯ ಸಂಗ್ರಾಮ ಎಂಬ ಪುಸ್ತಕಕ್ಕೆ ನಿಷೇಧ ಹೇರಲಾಯಿತು. ಪ್ರಪಂಚದಲ್ಲೇ ಇಂತಹ ಉದಾಹರಣೆ ಬೇರೆ ಇಲ್ಲ. ಲಂಡನ್‌ನಲ್ಲಿದ್ದಾಗ ಬರೆದ ಈ ಪುಸ್ತಕ 1908ರಲ್ಲಿ ಭಾರತಕ್ಕೆ ಬಂದಾಗ ದೊಡ್ಡ ಸ್ವಾತಂತ್ರ್ಯದ ಹೋರಾಟ ದೇಶದಲ್ಲಿ ಆರಂಭವಾಯಿತು. ಈ ಪುಸ್ತಕ ನಾಲ್ಕನೇ ಬಾರಿ ಮುದ್ರಣ ಆಗಿ 1908ರಿಂದ 1945ರವರೆಗೆ ದೇಶದಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಿತು ಎಂದರು.