ಕಿಕ್ಕೇರಿ ಕೆಪಿಎಸ್ ಶಾಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಬುಧವಾರ ಸಾವಿತ್ರಿಬಾಯಿ ಫುಲೆ ಜಯಂತಿ ನಡೆಯಿತು. ದೊರೆಸ್ವಾಮಿ, ಕೃಷ್ಣೇಗೌಡ, ಕುಮಾರಸ್ವಾಮಿ, ರವೀಂದ್ರ, ಮಂಜುನಾಥ, ರಮೇಶ್, ವಿನಾಯಕ್, ನಾಗೇಶ್, ಚಂದ್ರಿಕಾ ಹಾಜರಿದ್ದರು. 
ಜಿಲ್ಲೆ

ಕಿಕ್ಕೇರಿಯಲ್ಲಿ ಅಕ್ಷರದವ್ವ ಸ್ಮರಣೆ

ನಾಗೇಶ ಎಸ್

ಕಿಕ್ಕೇರಿ: ಶೋಷಿತ ಮಹಿಳೆಯರ ಧ್ವನಿಯಾದ ಅಕ್ಷರ ಕಲಿಸಿದ ಅಕ್ಕರೆಯ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಸ್ಮರಣೆ ಅವಶ್ಯವಿದೆ ಎಂದು ಪ್ರಾಂಶುಪಾಲ ದೊರೆಸ್ವಾಮಿ ತಿಳಿಸಿದರು.

ಪಟ್ಟಣದ ಕೆಪಿಎಸ್ ಶಾಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಬುಧವಾರ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 19ನೇ ಶತಮಾನದ ಮಧ್ಯಭಾಗದಲ್ಲಿ ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಾಗಿತ್ತು. ಶಿಕ್ಷಣ ಗಗನ ಕುಸುಮವಾಗಿ ಸಾಮಾಜಿಕ ವಿರೋಧವಿತ್ತು. ಇಂತಹ ಸಂದರ್ಭದಲ್ಲಿ ದಿಟ್ಟ ಹೆಜ್ಜೆ ಇಟ್ಟು ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದು ಸರಸ್ವತಿ ಮಾತೆಯಾದರು. ಶಿಕ್ಷಕರಿಲ್ಲದಾಗ ತಾವೇ ಶಿಕ್ಷಕರಾಗಿ ನಿಭಾಯಿಸಿದರು ಎಂದರು.

ಮೌಢ್ಯ, ಅಂಧಶ್ರದ್ಧೆ ವಿರುದ್ಧ ಹೋರಾಡಿದ ಅವರು ಪತಿ ಜ್ಯೋತಿಬಾ ಫುಲೆ ಸಹಕಾರದಿಂದ ಮಹಿಳೆಯರ ಸಮಾನತೆಗಾಗಿ ಅಕ್ಷರ ಕ್ರಾಂತಿ ಬೀಜ ಬಿತ್ತಿದರು. ಬಾಲ್ಯವಿವಾಹ, ಅನಕ್ಷರತೆ ವಿರುದ್ಧ ಹೋರಾಟ ಮಾಡಿದರು. ಮಹಿಳೆಯರಿಗಾಗಿ ಶಾಲೆ ತೆರೆದು ಸುಮಾರು 237ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಕಳಿಸಿದಾಗ ಅಪಹಾಸ್ಯ ಮಾಡಿದ ಅನೇಕರಿಗೆ ಅಕ್ಷರ ಕಲಿತು ಸುಶಿಕ್ಷಿತ ಮಹಿಳೆಯ ದಿಟ್ಟತನವನ್ನು ತೋರಿಸಿ ಆದರ್ಶವಾದರು ಎಂದು ನುಡಿದರು.

ಉಪನ್ಯಾಸಕ ರವೀಂದ್ರ ಮಾತನಾಡಿ, ವರ್ಣಾಶ್ರಮದಂತಹ ಪದ್ಧತಿ ವಿರುದ್ಧ ಫುಲೆ ನಿರಂತರ ಹೋರಾಡಿದರು. ಶಿಕ್ಷಕಿಯಾಗಲು ಯಾರೂ ಕೂಡ ಮುಂದೆ ಬಾರದಿರುವಾಗ ತಾವೇ ಶಿಕ್ಷಕಿಯಾದರು. ಶಾಲೆಗೆ ಹೋಗುವಾಗ ಇವರ ಮೇಲೆ ಹಲವರು ಕೆಸರು, ಸಗಣಿ ಎರುಚುವುದನ್ನು ಕಂಡು ನಿತ್ಯ ಎರಡು ಬಟ್ಟೆ ತೆಗೆದುಕೊಂಡು ಹೋಗುತ್ತಿದ್ದರು. ಕಷ್ಟವನ್ನು ಸಹಿಸಿಕೊಂಡು ಹೆಣ್ಣುಮಕ್ಕಳ ಶಿಕ್ಷಣ, ಸ್ವಾವಲಂಬನೆಗೆ ದಾರಿದೀಪವಾದರು ಎಂದು ಸ್ಮರಿಸಿದರು.
ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಮಂಜುನಾಥ, ರಮೇಶ್, ವಿನಾಯಕ್, ನಾಗೇಶ್, ಚಂದ್ರಿಕಾ ಹಾಜರಿದ್ದರು.