ಕಲಬುರಗಿ: ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕು, ಮನುಷ್ಯನಿಗೆ ಎದುರಾದ ಸಮಸ್ಯೆ ಬಗೆಹರಿಸುವ ಶಕ್ತಿ ಪ್ರಕೃತಿ ನೀಡಿದೆ. ಅದನ್ನು ಗುರುತಿಸಿ, ನಮ್ಮ ಶಕ್ತಿ ಸಾಮರ್ಥ್ಯ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಹೆಣ್ಣು, ಗಂಡು ಭೇದ ಮಾಡಬಾರದು ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಶ್ರೀ.ವಿ.ದಂಡೆ ಹೇಳಿದರು.
ಶರಣಬಸವೇಶ್ವರ ವಿಜ್ನಾನ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ೧೯೩ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಡಾ.ಓಂ ಪ್ರಕಾಶ ಮಾತನಾಡಿ, ಜ್ಯೋತಿಬಾಫುಲೆ, ಸಾವಿತ್ರಿಬಾಯಿ ಫುಲೆ ಅವರ ಹಾಗೆ ನಮ್ಮ ಶರಣಬಸವೇಶ್ವರ ಸಂಸ್ಥಾನದ ಏಳನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಹೆಣ್ಣು ಮಕ್ಕಳ ಕಲಿಕೆಗೆ ಮಹಿಳಾ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು ಎಂದು ಸ್ಮರಿಸಿದರು.
ವಿದ್ಯಾರ್ಥಿ ಗುರುಪ್ರಸಾದ್ ಸಾವಿತ್ರಿಬಾಯಿ ಪುಲೆ ಜೀವನದ ಬಗ್ಗೆ ಮಾಹಿತಿ ನೀಡಿದರು. ಉಪ ಪ್ರಾಚಾರ್ಯ ಡಾ.ಟಿ.ವಿ.ಬಿರಾದಾರ, ಸಂಯೋಜಕ ಡಾ.ಚಿತ್ರಲೇಖ ಆಲೂರ ಇತರರಿದ್ದರು. ಶ್ವೇತಾ ನಿರೂಪಣೆ ಮಾಡಿದರು. ವೇದ ಪ್ರಾರ್ಥಿಸಿದರು. ಸಂಗಮೇಶ ವಂದಿಸಿದರು.