ಜಿಲ್ಲೆ

ಸವಿತಾ ಸಮಾಜವನ್ನು ಪ್ರವರ್ಗ-1ಕ್ಕೆ ಸೇರಿಸಲು ಒತ್ತಾಯ

ಸದೇಶ್ ಕಾರ್ಮಾಡ್

ಮೈಸೂರು: ಸವಿತಾ ಸಮಾಜಕ್ಕೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ‘ಪ್ರವರ್ಗ-2 ಎ’ ನಿಂದ ‘ಪ್ರವರ್ಗ-1’ಕ್ಕೆ ಸೇರಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಲೇಖಕ ಮೈನ ಲೋಕೇಶ್ ಆಗ್ರಹಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಶ್ರೀ ಸವಿತಾ ಮಹರ್ಷಿ ಜಯಂತಿ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಪ್ರವರ್ಗ-2 ಎ’ನಲ್ಲಿ ಶೇ.15 ರಷ್ಟು ಮೀಸಲಾತಿ ಇದ್ದರೂ ಸಹ ಬಲಾಢ್ಯ ಸಮುದಾಯಗಳೇ ಶೇ.12.50 ರಷ್ಟು ಮೀಸಲಾತಿ ಪಡೆಯುತ್ತಿದ್ದು, ಇನ್ನು ಬಾಕಿ ಇರುವ ಶೇ.2.50 ರಷ್ಟು ಮೀಸಲಾತಿಗೆ ಸವಿತಾ ಸಮಾಜ ಸೇರಿದಂತೆ 107 ಸಮುದಾಯಗಳು ಹೋರಾಟ ನಡೆಸುವ ಪರಿಸ್ಥಿತಿ ಇದೆ. ನಮ್ಮ ಸಮುದಾಯದ ಸಂಕಷ್ಟ ಕೇಳುವವರು ಇಲ್ಲದಂತಾಗಿದೆ. ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ‘ಪ್ರವರ್ಗ-1’ಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಕ್ಷೌರಿಕರಿಗೆ ಆತ್ಮಗೌರವದ ಬದುಕು ದೊರೆಯಬೇಕು. ಇದಕ್ಕೆ ಕೇವಲ ಸರ್ಕಾರ, ಮತ್ತೊಬ್ಬರನ್ನು ದೂಷಣೆ ಮಾಡುತ್ತಾ ಕೂತರೆ ಆಗುವುದಿಲ್ಲ. ನಮ್ಮ ಸಮಾಜದ ಹಿರಿಮೆಯನ್ನು ನಾವು ಮರೆತ್ತಿದ್ದೇವೆ. ಈ ಹಿರಿಮೆಯನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಆಗಬೇಕು. ನಾವು ಅಭಿಮಾನ್ಯ ಶೂನ್ಯರಾಗದೆ, ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಗೆ ಸೇರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಸವಿತಾ ಸಮಾಜದವರು ಇದ್ದಾರೆ. ಇಷ್ಟೊಂದು ಜನಸಂಖ್ಯೆ ಇದ್ದರೂ ನಮಗೆ ರಾಜಕೀಯ ಪ್ರತಿನಿಧಿಗಳು ಇಲ್ಲದೆ ಇರುವುದು ಬೇಸರದ ಸಂಗತಿ. ರಾಜಕೀಯ ಪ್ರಾತಿನಿಧ್ಯ ಪಡೆಯಲು ನಾವು ಸಂಘಟಿತರಾಗುವ ಅವಶ್ಯಕಕತೆ ಇದೆ ಎಂದು ಹೇಳಿದರು.

ಸವಿತಾ ಸಮಾಜದವರನ್ನು ನೋಡಬಾರದು ಎಂಬ ಮೂಢನಂಬಿಕೆ ಹೊಂದಿರುವ ಜನರು ಇಂದಿಗೂ ಇದ್ದಾರೆ. ಈ ಮೂಢನಂಬಿಕೆ ಯನ್ನು ಹೋಗಲಾಡಿಸಲು ಬಸವಣ್ಣ 12ನೇ ಶತಮಾನದಲ್ಲಿಯೇ ಪ್ರಯತ್ನ ಮಾಡಿದ್ದರು. ಬಸವಣ್ಣ ಅವರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಸವಿತಾ ಸಮಾಜದ ಹಡಪದ ಅಪ್ಪಣ್ಣ ಅವರನ್ನು ನೇಮಿಸಿದರು. ‘ಅನುಭವ ಮಂಟಪಕ್ಕೆ ನನ್ನನ್ನು ಕಾಣಲು ಯಾರೆಲ್ಲ ಬರುವರೋ ಅವರೆಲ್ಲ ಮೊದಲು ಹಡಪದ ಅಪ್ಪಣ್ಣ ಅವರನ್ನು ಕಂಡು ನಂತರ ನನ್ನ ಬಳಿಗೆ ಬರಬೇಕು’ ಎಂದು ಬಸವಣ್ಣ ಆದೇಶ ಹೊರಡಿಸಿದ್ದರು. ಆ ಮೂಲಕ ಸವಿತಾ ಸಮಾಜವನ್ನು ನೋಡಬಾರದು ಎಂಬ ಮೂಢ ನಂಬಿಕೆಯನ್ನು ಬಸವಣ್ಣ ತೊಡೆದು ಹಾಕಲು ಪ್ರಯತ್ನಿಸಿದ್ದರು. ಇಂದಿಗೂ ಸವಿತಾ ಸಮಾಜದವರನ್ನು ನಿಷೇಧಿತ ಪದಗಳಿಂದ ಕರೆಯುತ್ತಿದ್ದು, ನಿಷೇಧಿತ ಪದ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕೆ ಆಂಧ್ರಪ್ರದೇಶ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಮಾತನಾಡಿ, ಯಾವುದೇ ಸಮಾಜ ಮುಖ್ಯವಾಹಿನಿಗೆ ಬರಲು ಶಿಕ್ಷಣ ಅತ್ಯಂತ ಮುಖ್ಯ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಸವಿತಾ ಸಮಾಜದವರು ಯಾವುದೇ ಜಾತಿ, ಮತ ಬೇಧವಿಲ್ಲದೆ ಎಲ್ಲರಿಗೂ ಸೇವೆ ನೀಡುತ್ತಿದ್ದಾರೆ. ಇದು ಸವಿತಾ ಸಮಾಜದ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಸವಿತಾಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇದ್ದರು.