ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಶ್ರೀ ಸವಿತಾ ಮಹರ್ಷಿಗಳು ಪ್ರಾಮಾಣಿಕತೆ, ಕಾಯಕ ನಿಷ್ಠೆಗೆ ಹೆಸರಾದವರು, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್‌ನಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಮಹರ್ಷಿಗಳ ಕೊಡುಗೆ ಅಪಾರವಾಗಿದೆ, ಈ ಹಿನ್ನೆಲೆಯಲ್ಲಿ ನಾವೇಲ್ಲರು ಶ್ರೀ ಸವಿತಾ ಮಹರ್ಷಿ ತತ್ವಾದರ್ಶಗಳನ್ನು ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಮುಖ್ಯವಾಹಿನಿಗೆ ತರುವ ಉದ್ದೇಶ: ಸರ್ಕಾರ ಪ್ರತಿ ಸಮುದಾಯವನ್ನು ಗೌರವಿಸಿ ಹಲವು ಮಹಾನ್ ಚೇತನರ ಜಯಂತಿಗಳನ್ನು ಮಾಡುತ್ತಾ ಬಂದಿದೆ. ಗಣ್ಯ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ಇಂಥ ಜಯಂತಿಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರು. ಸಮಾಜದ ಪ್ರತಿಯೊಬ್ಬರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಆಗಬೇಕು, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ನಡೆಸುತ್ತಾ ಬಂದಿದೆ ಎಂದು ಡಿಸಿ ತಿಳಿಸಿದರು.ಸವಿತಾ ಸಮಾಜ ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಪ್ರತಿಯೊಬ್ಬರೂ ತಾನು ಮಾಡುವ ಕಾಯಕದ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಅಂತಹ ಕಾಯಕ ನಿಷ್ಠೆಯನ್ನು ಸವಿತಾ ಮಹರ್ಷಿಗಳು ಹೊಂದಿದ್ದರು. ಸವಿತಾ ಮಹರ್ಷಿಗಳ ತತ್ವ-ಸಂದೇಶಗಳು ಸರ್ವಕಾಲಿಕವಾಗಿದ್ದು, ಅವರ ತತ್ವಾದರ್ಶಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಂಡಾಗ, ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ ಎಂದರು.
ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರತಿ ಸಮಾಜವು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಸ್ವಾವಲಂಬಿಸಿ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಸರ್ಕಾರದಿಂದ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಸವಿತಾ ಸಮಾಜದವರಿಗೆ ತಲುಪಿಸಲು ಜಿಲ್ಲಾಡಳಿತ ಸದಾ ಸಿದ್ಧವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದರು. ಸವಿತಾ ಸಮುದಾಯದ ಮನವಿಗಳಿಗೆ ಸ್ಪಂದಿಸಿ ದೇವನಹಳ್ಳಿ ಟೌನ್‌ನಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಒದಗಿಸಲು ಕ್ರಮ ಹಾಗೂ ಸಂಗೀತ ಶಾಲೆ ಮೇಲ್ದರ್ಜೆಗೇರಿಸಲು ಹಾಗೂ ದೇವನಹಳ್ಳಿಯ ಯಾವುದಾದರೂ ಒಂದು ವೃತ್ತಕ್ಕೆ ಸವಿತಾ ಮಹರ್ಷಿ ಹೆಸರಿಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಇದು ಸವಿತಾ ಸಮಾಜಕ್ಕೆ ಒಳಿತಾಗಲಿದೆ ಎಂದು ತಿಳಿಸಿದರು.
ತನ್ನದೇ ಇತಿಹಾಸ ಹೊಂದಿದೆ: ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೃಷ್ಣಪ್ಪ, ಸವಿತಾ ಸಮಾಜ ಪೌರಾಣಿಕವಾಗಿ, ಐತಿಹಾಸಿಕವಾಗಿ, ತನ್ನದೇ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು. ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು, ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದವರು ಸವಿತಾ ಮಹರ್ಷಿಗಳು ಎಂದು ಪ್ರತೀತಿ ಇದೆ ಎಂದರು. ಶಿವನಿಂದ ಚೌಲಕರ್ಮ, ಆಯುರ್ವೇದ ವೈದ್ಯ ಪದ್ಧತಿ, ಸಂಗೀತ ವರಗಳನ್ನು ಪಡೆದರು. ಅಂದಿನಿಂದ ಇಂದಿನವರೆಗೂ ಸವಿತಾ ಸಮಾಜದವರು ಆಯುರ್ವೇದ ವೈದ್ಯ ವೃತ್ತಿ, ಕ್ಷೌರಿಕ, ಡೋಲು, ನಾದಸ್ವರ, ವಾದನ, ಸಂಗೀತದ ವಿವಿಧ ಕಾಯಕದಲ್ಲಿ ತೊಡಗಿದ್ದಾರೆ ಎಂದರು.