ವಿಜಯಪುರ: ಉದ್ಯೋಗದ ಆಮಿಷ ತೋರಿ ವಿದೇಶಕ್ಕೆ ಕರೆದೊಯ್ದು ನಿಗದಿತ ಉದ್ಯೋಗ ನೀಡದೇ ಒಂಟೆ ಮೇಯಿಸುವ ಕೆಲಸಕ್ಕೆ ಹಚ್ಚಿದ್ದಲ್ಲದೇ ಸಂಬಳವನ್ನೂ ನೀಡದೆ ಚಿತ್ರಹಿಂಸೆ ನೀಡಿರುವ ಪ್ರಕರಣವೊಂದು ಸಂಸದ ರಮೇಶ ಜಿಗಜಿಣಗಿ ಅವರ ಇಚ್ಛಾಶಕ್ತಿಯ ಫಲವಾಗಿ ಸುಖಾಂತ್ಯ ಕಂಡಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ತಿಳಿಸಿದರು.
ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಅಡವಿಸಂಗಾಪುರ ಗ್ರಾಮದ ಸಚಿನ ಜಂಗಮಶೆಟ್ಟಿ ಹಾಗೂ ವಿಶಾಲ ಶ್ರೀಕಾಂತ ಸೇಲರ ಎಂಬ ಯುವಕರು ಕುವೈತ್‌ನ ಕರಾಳಕೂಪದಿಂದ ಬಚಾವ್ ಆಗಿ ಬಂದಿದ್ದು, ಇದೀಗ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ. ಮಾತ್ರವಲ್ಲ, ಸುರಕ್ಷಿತವಾಗಿ ತವರು ಸೇರಿಸಿದ್ದಕ್ಕಾಗಿ ಸಂಸದ ರಮೇಶ ಜಿಗಜಿಣಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕೋಳಕೂರ ಬುಧವಾರ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ನುಡಿದರು.
ಕಳೆದ ಆರು ತಿಂಗಳ ಹಿಂದೆ ಮುಂಬೈನ ಇಫ್ಕಾರ ಎಂಬ ದಲ್ಲಾಳಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷ ರೂಪಾಯಿ ಕಮೀಷನ್ ಪಡೆದು ಕುವೈತ್‌ಗೆ ಕರೆದೊಯ್ದಿದ್ದನು. ಅಲ್ಲಿ ತರಕಾರಿ ಪ್ಯಾಕ್ ಮಾಡುವ ಕೆಲಸಕ್ಕೆ ನೇಮಿಸುವುದಾಗಿ ತಿಳಿಸಿದ್ದನು. ಆದರೆ, ಅಲ್ಲಿ ಸಲ್ಮಾನ್ ಬರಾಕ್ ಎಂಬುವನ ಬಳಿಗೆ ಕರೆದೊಯ್ದಿದ್ದು, ಆತ ಒಂಟೆ ಕಾಯುವ ಕೆಲಸಕ್ಕೆ ನೇಮಿಸಿದನು. ಒಪ್ಪಂದದ ಪ್ರಕಾರ ತಿಂಗಳಿಗೆ 32 ಸಾವಿರ ರೂಪಾಯಿ ಸಂಬಳ ನೀಡಬೇಕಿತ್ತು. ಆದರೆ, ಆರು ತಿಂಗಳು ದುಡಿಸಿಕೊಂಡು ಕೇವಲ ಮೂರು ತಿಂಗಳ ಸಂಬಳ ಮಾತ್ರ ನೀಡಿದ್ದಾರೆ. ಮೊಬೈಲ್ ಕಸಿದುಕೊಂಡು ಚಿತ್ರ ಹಿಂಸೆ ನೀಡಿದ್ದಾರೆಂದು ಯುವಕರು ತಿಳಿಸಿದಾಗ ಕರಳು ಚುರ್ ಎನ್ನಿಸಿತು. ಕೂಡಲೇ ಗ್ರಾಮದ ಮಲ್ಲು ಕನ್ನೂರ ಮತ್ತಿತರು ಸೇರಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಸಂಪರ್ಕಿಸಲಾಗಿ ಅವರು ವಿದೇಶಾಂಗ ಮಂತ್ರಿಗೆ ಪತ್ರ ಬರೆದಿದ್ದರು ಎಂದು ಕೋಳಕೂರ ವಿವರಿಸಿದರು.
ಸಂಸದ ರಮೇಶ ಜಿಗಜಿಣಗಿ ಅವರ ಪರಿಶ್ರಮದ ಫಲವಾಗಿ ವಿದೇಶಾಂಗ ಸಚಿವಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲದೇ ಕೂಡಲೇ ಯುವಕರನ್ನು ಸಂಪರ್ಕಿಸಿದೆ. ಏಳು ದಿನಗಳ ಕಾಲ ಅವರನ್ನು ವಿದೇಶಾಂಗ ಕಾರ್ಯಾಲಯದಲ್ಲಿ ಇರಿಸಿಕೊಂಡು ಅಲ್ಲಿಂದ ಮುಂಬೈಗೆ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಅಲ್ಲಿಂದ ಯುವಕರನ್ನು ತಂದೆ-ತಾಯಿ ಮಡಿಲಿಗೆ ಸೇರಿಸಲಾಗಿದ್ದು, ಇದೊಂದು ಸಾರ್ಥಕ ಹಾಗೂ ಸಂತೃಪ್ತ ಕ್ಷಣ ಎಂದ ಕೋಳಕೂರ, ಸಂಸದರು ಜಿಲ್ಲೆ ಮಾತ್ರವಲ್ಲ ವಿದೇಶದಲ್ಲಿರುವ ನಮ್ಮವರನ್ನೂ ರಕ್ಷಿಸಬಹುದೆಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಮಲ್ಲು ಕನ್ನೂರ, ಮುಖಂಡರಾದ ಶ್ರೀಶೈಲ ಕೋಟ್ಯಾಳ, ಬಸವರಾಜ ಕುರುಹಿನಶೆಟ್ಟಿ, ಚಿನ್ನಪ್ಪ ಜಂಗಮಶೆಟ್ಟಿ, ಸಿದ್ರಾಮ ಜಂಗಮಶೆಟ್ಟಿ, ವಿಜಯ ಜೋಶಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಕುವೈತ್‌ನಲ್ಲಿ ಊಟ, ವಸತಿ ಕೊಡದೆ ಚಿತ್ರಹಿಂಸೆ ನೀಡಿದರು. ಏನಾದರೂ ಕೇಳಿದರೆ ಹೊಡೆದು-ಬಡಿದು, ಚಾಕು ತೋರಿಸಿ ಹೆದರಿಸುತ್ತಿದ್ದರು. ಮೊಬೈಲ್‌ನಲ್ಲಿ ಮಾತನಾಡಲು ಸಹ ಬಿಡುತ್ತಿರಲಿಲ್ಲ. ಹೀಗಾಗಿ ಬದುಕಿನ ಆಸೆಯೇ ಕಳೆದುಕೊಂಡಿದ್ದೆವು. ನಮ್ಮ ಜೀವನ ಇಲ್ಲಿಗೇ ಮುಗಿಯಿತು ಎಂದು ಕಣ್ಣೀರಾದಾಗ ದೇವರಂತೆ ಕಾಪಾಡಿದವರು ಸಂಸದ ರಮೇಶ ಜಿಗಜಿಣಗಿ ಅವರು. ನಮ್ಮೂರಿನವರಿಗೆ ಫೋನ್ ಮೂಲಕ ಸಂಪರ್ಕಿಸಿದಾಗಿ ಅವರು ಸಂಸದರ ಸಹಾಯದಿಂದ ನಮ್ಮನ್ನು ಮರಳಿ ತಂದೆ-ತಾಯಿ ಮಡಿಲು ಸೇರಿಸಿದ್ದಾರೆ. ಅವರ ಉಪಕಾರ ಎಂದಿಗೂ ಮರೆಯಲಸಾಧ್ಯ.-ವಿಶಾಲ ಶ್ರೀಕಾಂತ ಸೇಲರ, ಸಂತ್ರಸ್ತ ಯುವಕ