ಜಿಲ್ಲೆ

ನೇಕಾರಿಕೆ ಉಳಿಸುವ ಅಭಿಯಾನಕ್ಕೆ ಕರೊನಾ ಅಡ್ಡಿ

Udupi

ಗೋಪಾಲಕೃಷ್ಣ ಪಾದೂರು ಉಡುಪಿ

ಕದಿಕೆ ಟ್ರಸ್ಟ್ ಆಶ್ರಯ ಮತ್ತು ನಬಾರ್ಡ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಉಡುಪಿ ಸೀರೆ ಪುನಶ್ಚೇತನ ಅಭಿಯಾನ ಪರಿಣಾಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ನೇಕಾರರು ಮೂಲ ವೃತ್ತಿಗೆ ಮರಳುತ್ತಿದ್ದಾರೆ. ಆದರೆ ಲಾಕ್‌ಡೌನ್‌ನಿಂದ ನೇಕಾರ ಸಂಘದಲ್ಲಿ ಸೀರೆ ನೇಯಲು ಸಾಧ್ಯವಾಗುತ್ತಿಲ್ಲ. ಕೈಮಗ್ಗಗಳನ್ನು ಹಲವು ದಿನ ಬಳಸದೆ, ನೂಲು ಹಾಳಾಗುವ ಅತಂಕ ಎದುರಾಗಿದೆ.
ಮನೆಯಲ್ಲಿ ಮಗ್ಗ ಇರುವ ಹಿರಿಯ ನೇಕಾರರು ತೊಂದರೆ ಇಲ್ಲದೆ ಸೀರೆ ನೇಯುತ್ತಿದ್ದಾರೆ. ಆದರೆ ಮರಳಿ ಬಂದ ಮತ್ತು ಹೊಸದಾಗಿ ಸೇರಿದ ನೇಕಾರರಿಗೆ ಈ ವ್ಯವಸ್ಥೆಗಳಿಲ್ಲ. ಅವರು ನೇಕಾರ ಸಂಘಕ್ಕೆ ಬರುವುದು ಅನಿವಾರ್ಯ. ಮಗ್ಗವನ್ನು ಉಪಯೋಗಿಸದೆ ಬಿಟ್ಟರೆ ಮತ್ತೆ ಚಾಲನೆ ಮಾಡುವಾಗ ಸಮಸ್ಯೆ ಎದುರಾಗುತ್ತದೆ. ಸೊಸೈಟಿಯಲ್ಲಿ 24 ಯುವ ನೇಕಾರರು ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿಯುವಂತಾಗಿದೆ.

ಸಂಘಗಳು ಬಂದ್, ಮಾರಾಟಕ್ಕೆ ಪರದಾಟ
ಉಡುಪಿ ನೇಕಾರರ ಸಂಘದಲ್ಲಿ 11, ಶಿವಳ್ಳಿ ಸಂಘದಲ್ಲಿ 7, ಬ್ರಹ್ಮಾವರ ಸೊಸೈಟಿಯಲ್ಲಿ 4, ಹಳೆಯಂಗಡಿ ಸಂಘದಲ್ಲಿ ನಾಲ್ವರು ಪರಂಪರಾಗತ ಶೈಲಿಯಲ್ಲಿ ಉಡುಪಿ ಸೀರೆ ನೇಯುತ್ತಿದ್ದಾರೆ. ಸರ್ಕಾರ ಲಾಕ್‌ಡೌನ್‌ನಲ್ಲಿ ನೇಕಾರಿಕೆಗೆ ವಿನಾಯಿತಿ ನೀಡದ ಕಾರಣ ನೇಕಾರರ ಸಂಘಗಳು ಮುಚ್ಚಿವೆ. ನೂಲು ಖರೀದಿ ಹಾಗೂ ಸೀರೆ ಮಾರಾಟಕ್ಕೆ ಇದರಿಂದ ತೊಡಕಾಗಿದೆ. ಲಾಕ್‌ಡೌನ್ ಮುಂದುವರಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಶ್ರಮಜೀವಿಗಳ ಮಜೂರಿ ಏರಿಕೆ
ಮಾಧ್ಯಮಗಳಲ್ಲಿ ಉಡುಪಿ ಸೀರೆಗೆ ಸಾಕಷ್ಟು ಪ್ರಚಾರ ಸಿಕ್ಕಿದ್ದರಿಂದ ಸೀರೆ ಬೇಡಿಕೆ ಹೆಚ್ಚಿದೆ. ಎರಡು ವರ್ಷಗಳ ಹಿಂದೆ ತಾಳಿಪಾಡಿ ನೇಕಾರರ ಸಂಘದಲ್ಲಿ ಕೈಮಗ್ಗ ಸೀರೆ ನೇಯುತ್ತಿದ್ದವರು ಎಂಟು ಮಂದಿ. ಈಗ 35 ಮಂದಿ ನೇಕಾರಿಕೆಯಲ್ಲಿ ತೊಡಗಿದ್ದಾರೆ. ಶ್ರಮಜೀವಿಗಳಿಗೆ ನೀಡುವ ಸಂಭಾವನೆಯೂ ಹೆಚ್ಚಾಗಿದ್ದು, 80 ಕೌಂಟ್ಸ್ ಸೀರೆಗೆ ಹಿಂದೆ 300 ರೂ.ನೀಡುತ್ತಿದ್ದರೆ ದುಪ್ಪಟ್ಟು ಮಜೂರಿ. ಇತರ ವಸ್ತ್ರಗಳಿಗೆ ಮೀಟರ್‌ಗೆ 50-55 ರೂ.ಇದ್ದ ಮಜೂರಿ ಈಗ 80ರಿಂದ 110ಕ್ಕೆ ಏರಿದೆ. ಹೀಗಾಗಿ ಯುವ ಪೀಳಿಗೆಯ ಅನೇಕ ಮಂದಿ ಮೂಲವೃತ್ತಿಗೆ ವಾಪಸಾಗುತ್ತಿದ್ದಾರೆ.

ನಬಾರ್ಡ್ ಅನುದಾನದಲ್ಲಿ 20 ಮಂದಿಗೆ ತರಬೇತಿ
ಉಡುಪಿ ಸೀರೆ ಪುನಶ್ಚೇತನ ಅಭಿಯಾನಕ್ಕೆ ನಬಾರ್ಡ್ 9 ಲಕ್ಷ ರೂ.ಅನುದಾನ ಮಂಜೂರು ಮಾಡಿದೆ. 20 ಮಂದಿಗೆ ಸಂಭಾವನೆ ಸಹಿತ, ಸೀರೆ ನೇಯುವ ವಿಶೇಷ ತರಬೇತಿ ನೀಡಲಾಗುತ್ತಿದೆ. ಜತೆಗೆ ವಾಟ್ಸ್‌ಆೃಪ್ ಗ್ರೂಪ್ ರಚಿಸಿ ಸೀರೆಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ. ಇದಕ್ಕೆ ದೇಶ-ವಿದೇಶಗಳಿಂದ ಬೇಡಿಕೆ ಬರುತ್ತಿದ್ದು, ಆನ್‌ಲೈನ್ ಮೂಲಕ ಸಂವಹನ ಮಾಡಿ ನೇಕಾರರ ಸಂಘ ಮೂಲಕ ನೇರವಾಗಿ ಕಳುಹಿಸುವ ವ್ಯವಸ್ಥೆ ಕದಿಕೆ ಟ್ರಸ್ಟ್ ಮಾಡುತ್ತಿದೆ. ತಾಳಿಪಾಡಿ ನೇಕಾರ ಸಂಘಕ್ಕೆ ನಬಾರ್ಡ್ ಮತ್ತು ಟ್ರಸ್ಟ್ ತಲಾ 5 ಕೈಮಗ್ಗಗಳನ್ನು ನೀಡಿದೆ. ನೇಕಾರರರಿಗೆ ಪ್ರೋತ್ಸಾಹ ಧನ, ಚಿಕಿತ್ಸಾ ವೆಚ್ಚ ನೀಡಲಾಗುತ್ತಿದೆ. ಅಭಿಯಾನ ಅಂಗವಾಗಿ ಟ್ರಸ್ಟ್ ಉಡುಪಿ ಸೀರೆಗೆ ವಿಶೇಷ ಚಿಹ್ನೆ ರಚಿಸಿ, ನೇಕಾರರ ಚಿತ್ರ ಮತ್ತು ಹೆಸರು, ಎಐ ಲೋಗೋ ಇರುವ ಲೇಬಲ್ ಮಾಡಿ ಬ್ರಾಂಡಿಂಗ್ ಮಾಡಿದೆ. ಸಹಜ ಬಣ್ಣದ ಹಾಗೂ ನೂತನ ವಿನ್ಯಾಸದ ಸೀರೆಗಳನ್ನೂ ಪರಿಚಯಿಸುತ್ತಿದೆ.

36 ವರ್ಷ ಬಳಿಕ ಮೂಲವೃತ್ತಿಗೆ
ಸೀರೆ ನೇಯ್ಗೆಯಲ್ಲಿ ಪರಿಣತಿ ಮುಖ್ಯ. ದಶಕಗಳ ಹಿಂದೆ ಈ ವೃತ್ತಿ ತೊರೆದವರನ್ನೂ ಯೋಜನೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ತಾಳಿಪಾಡಿ ಗುತ್ತಕಾಡು ನಿವಾಸಿ ವೆಂಕಟೇಶ್ ಶೆಟ್ಟಿಗಾರ್ ತಮ್ಮ 22ನೇ ವಯಸ್ಸಿನಲ್ಲಿ ಪರಂಪರಾಗತ ವೃತ್ತಿ ಬಿಟ್ಟು ಮರಮಟ್ಟುಗಳ ವಿಲೇವಾರಿ ಕೆಲಸಕ್ಕೆ ಸೇರಿದ್ದರು. ಎರಡು ವರ್ಷಗಳ ಹಿಂದೆ ಮತ್ತೆ ಮೂಲವೃತ್ತಿಗೆ ವಾಪಸಾಗಿ, ಈಗ ಮುಂದುವರಿಸುತ್ತಿದ್ದಾರೆ. ವೆಂಕಟೇಶ್ ಶೆಟ್ಟಿಗಾರ್ ಅತ್ಯಂತ ಕುಶಲ ನೇಕಾರರಲ್ಲಿ ಒಬ್ಬರು. ಸೂಕ್ಷ್ಮನೂಲಿನ 80 ಕೌಂಟ್‌ನ ಸೀರೆಗಳ ಮೇಲೆ ವಿವಿಧ ವಿನ್ಯಾಸದ ಬುಟ್ಟಾ ನೇಯಬಲ್ಲವರು. ಸೀರೆಯ ‘ಇಕತ್’ ವಿನ್ಯಾಸದಲ್ಲಿ ಇವರು ರಚಿಸಿದ ತಾಜ್‌ಮಹಲ್ ಪ್ರಸಿದ್ಧ. ಉಭಯ ಜಿಲ್ಲೆಗಳಲ್ಲಿ 80 ಕೌಂಟ್ ನೇಯ್ಗೆ ವೃತ್ತಿ ಮಾಡುವವರು 9 ಜನರಷ್ಟೇ ಇದ್ದಾರೆ.

ಮೂರು ವರ್ಷಗಳಿಂದ ಉಡುಪಿ ಸೀರೆ ನೇಕಾರಿಕೆ ಉಳಿಸಿ ಅಭಿಯಾನ ನಡೆಯುತ್ತಿತ್ತು. ಆದರೆ, ಕರೊನಾ ಮತ್ತು ಲಾಕ್‌ಡೌನ್ ಕಾರಣ ಹಿನ್ನಡೆಯಾಗಿದೆ. ಮನೆಯಲ್ಲಿ ಮಗ್ಗ ಇರುವ ಹಿರಿಯ ನೇಕಾರರಿಗೆ ತೊಂದರೆ ಇಲ್ಲ. ಆದರೆ ನೇಕಾರರ ಸಂಘಕ್ಕೆ ಬಂದು ನೇಯಲು ಸಾಧ್ಯವಾಗುತ್ತಿಲ್ಲ. ಮಗ್ಗ ಉಪಯೋಗಿಸದೆ ಬಿಟ್ಟರೆ ಮತ್ತೆ ಚಾಲನೆ ಮಾಡುವಾಗ ಸಮಸ್ಯೆ ಎದುರಾಗುತ್ತದೆ. ಸರ್ಕಾರ ಮತ್ತು ಕೈ ಮಗ್ಗ ಇಲಾಖೆ ಇತ್ತ ಗಮನ ಹರಿಸಬೇಕು.
ಮಮತಾ ರೈ, ಮುಖ್ಯಸ್ಥೆ, ಕಾರ್ಕಳ ಕದಿಕೆ ಟ್ರಸ್ಟ್